ನೈರೋಬಿ: ಚಾಲಕನ ನಿಯಂತ್ರಣ ತಪ್ಪಿ ಹಡಗಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಪಾದಚಾರಿಗಳ ಮೇಲೆ ಹರಿದ ಪರಿಣಾಮ 48 ಮಂದಿ ಮೃತಪಟ್ಟಿದ್ದು ಸಾಕಷ್ಟು ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಕೀನ್ಯಾದ ಲೊಂಡಿಯಾನಿ ಪ್ರದೇಶದಲ್ಲಿ ಸಂಭವಿಸಿದೆ.
ರಾಜಧಾನಿ ನೈರೋಬಿಯ ವಾಯುವ್ಯಕ್ಕೆ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಲೊಂಡಿಯಾನಿಯ ರಿಫ್ಟ್ ವ್ಯಾಲಿ ಪಟ್ಟಣದ ಸಮೀಪ ಶುಕ್ರವಾರ ಸಂಜೆ ರಸ್ತೆ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಗಾಯಗೊಂಡಿರುವವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಸ್ಥಳದಲ್ಲೇ 48 ಜನ ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಸ್ಪಷ್ಟ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ ಎಂದು ರಿಫ್ಟ್ ವ್ಯಾಲಿ ಪೊಲೀಸ್ ಕಮಾಂಡರ್ ಟಾಮ್ ಒಡೆರಾ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದ್ದಾರೆ.
ರಾತ್ರಿ ಪೂರ್ತಿಯೂ ರಕ್ಷಣಾ ಕಾರ್ಯಾಚರಣೆ ನಡೆದಿದ್ದು ಭಾರೀ ಮಳೆಯು ಕಾರ್ಯಾಚರಣೆಗೆ ಅಡ್ಡಿಪಡಿಸಿತು. ಇನ್ನೂ ಕೆಲವರು ಧ್ವಂಸಗೊಂಡ ವಾಹನಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕೀನ್ಯಾ ರೆಡ್ಕ್ರಾಸ್ ಸೊಸೈಟಿ ಹೇಳಿದೆ.
ಲೊಂಡಿಯಾನಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಸಂಬಂಧ ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ದೇಶವು ಶೋಕಿಸುತ್ತದೆ ಎಂದಿದ್ದಾರೆ.