ವಾಷಿಂಗ್ಟನ್: ಅಮೆರಿಕದಲ್ಲಿ ಜನರಿಗೆ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಖುಷಿಯ ವಿಚಾರವನ್ನು ನೀಡಿದೆ. ಕಳೆದ 15 ತಿಂಗಳಿಂದ 10 ಬಾರಿ ಬಡ್ಡಿದರ ಹೆಚ್ಚಿಸಿದ್ದ ಫೆಡರಲ್ ರಿಸರ್ವ್ ಈ ಬಾರಿ ಹೆಚ್ಚಳಕ್ಕೆ ಬ್ರೇಕ್ ಹಾಕಿದೆ
ಜೂನ್ 13ರಿಂದ ಎರಡು ದಿನಗಳ ಕಾಲ ಹಣಕಾಸು ನೀತಿ ಸಭೆ ನಡೆಸಿದ ಫೆಡರಲ್ ರಿಸರ್ವ್ ಬ್ಯಾಂಕ್, ಬಡ್ಡಿ ದರವನ್ನು ಶೇ. 5ರಿಂದ ಶೇ. 5.25ರ ವ್ಯಾಪ್ತಿಯಲ್ಲೇ ಮುಂದುವರಿಸಲು ನಿರ್ಧರಿಸಿದೆ. ಆದರೆ, ಈ ವರ್ಷ ಎರಡು ಬಾರಿ ಸಣ್ಣ ಪ್ರಮಾಣದಲ್ಲಿ ಬಡ್ಡಿ ದರಗಳನ್ನು ಹೆಚ್ಚಿಸುವುದಾಗಿ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಸುಳಿವು ನೀಡಿದೆ.
ಅಮೆರಿಕದಲ್ಲಿ 2022ಆರಂಭದಲ್ಲಿ ಶೇ. 8ರ ಮೇಲಿದ್ದ ಹಣದುಬ್ಬರವನ್ನು ನಿಯಂತ್ರಿಸಲು ಅಲ್ಲಿನ ಸೆಂಟ್ರಲ್ ಬ್ಯಾಂಕ್ ಸತತವಾಗಿ ಬಡ್ಡಿ ದರ ಹೆಚ್ಚಿಸುತ್ತಾ ಬಂದಿತ್ತು. ಶೇ. 0.25ರಿಂದ ಶೇ. 0.50ರಷ್ಟಿದ್ದ ಬಡ್ಡಿ ದರ ಶೇ. 5.25ರವರೆಗೂ ಏರಿಕೆ ಆಗಿದೆ. ಹಣದುಬ್ಬರ ಶೇ. 8.3ರಷ್ಟಿದ್ದದ್ದು ಈಗ 2023ರ ಮೇ ತಿಂಗಳಲ್ಲಿ ಶೇ. 4.1ಕ್ಕೆ ಬಂದು ಇಳಿದಿದೆ. ಆದರೆ, ಫೆಡರಲ್ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಶೇ. 2ಕ್ಕೆ ಇಳಿಸುವ ಗುರಿ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಬಡ್ಡಿ ದರ ಏರಿಕೆ ಮುಂದುವರಿಯಬಹುದು ಎಂದು ಬಹಳ ಮಂದಿ ನಿರೀಕ್ಷಿಸಿದ್ದರು. ಆದರೆ, ಫೆಡರಲ್ ರಿಸರ್ವ್ನ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ನಡೆಸಿದ ಎರಡು ದಿನದ ಸಭೆಯಲ್ಲಿ ಬಡ್ಡಿ ದರ ಏರಿಕೆಗೆ ಅಲ್ಪವಿರಾಮ ಹಾಕುವ ನಿರ್ಧಾರಕ್ಕೆ ಬರಲಾಗಿದೆ.