ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ
ಮಹಾರಾಷ್ಟ್ರ ಗಡಿಭಾಗದ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ಡಿಹೆಚ್ಓ ಡಾ ಬಸವರಾಜ ಹುಬ್ಬಳ್ಳಿ ನೇತೃತ್ವದಲ್ಲಿ ಚಡಚಣ ಪಟ್ಟಣದ ಖಾಸಗಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಲಾಯಿತು. ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿರುವ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ವಿವಿಧ ಆಸ್ಪತ್ರೆಗಳಿಗೆ ಹಾಗೂ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ದರಪಟ್ಟಿ ಹಾಕದಿದ್ದ ಕೆಲ ಖಾಸಗಿ ಆಸ್ಪತ್ರೆಯವರಿಗೆ ಡಿಹೆಚ್ಓ ಬಸವರಾಜ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಣ್ಣಪುಟ್ಟ ಲೋಪದೋಷ ಕಂಡು ಬಂದ ಹಿನ್ನಲೆ ನೊಟೀಸ್ ನೀಡಲಾಗಿದೆ. ಕೆಪಿಎಂಇ ಕಾಯ್ದೆಯಡಿ ನೊಂದಣಿ ಕಡ್ಡಾಯ ಹಾಗೂ ಚಿಕಿತ್ಸೆ ದರಪಟ್ಟಿ ಹಾಕಬೇಕು ಅಂತ ಡಿಹೆಚ್ಓ ಸೂಚಿಸಿದ್ದಾರೆ.
ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿ ನಕಲಿ ವೈದ್ಯನ ಫಾರ್ಮ್ ಹೌಸ್ ನಲ್ಲಿ ಹತ್ಯೆಯಾದ ನವಜಾತ ಶಿಶುಗಳು ಸಿಕ್ಕಿದ್ದವು. ಇದೇ ಪ್ರಕರಣ ಬೆನ್ನು ಬಿದ್ದಿರುವ ಪೊಲೀಸರು
ಹಿಂಡಲಗಾ ಜೈಲಿನಲ್ಲಿದ್ದ ಆರೋಪಿಯನ್ನ ಕಸ್ಟಡಿಗೆ ಪಡೆದು ಡ್ರಿಲ್ ಮಾಡಿದ್ದಾರೆ. ಜೊತೆಗೆ ಆತನ ಆಸ್ಪತ್ರೆಗೆ ಕರೆತಂದು ಪಂಚನಾಮೆ ಕೂಡ ಮಾಡಿದ್ದಾರೆ.ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ನಕಲಿ ವೈದ್ಯನ ಫಾರ್ಮ್ ಹೌಸ್ ನಲ್ಲಿ ಸರ್ಚಿಂಗ್ ನಡೆಸಿ ಹತ್ಯೆಯಾದ ಭ್ರೂಣಗಳನ್ನ ಪತ್ತೆ ಹಚ್ಚಿದ್ದರು.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಹೊರ ವಲಯದಲ್ಲಿದ್ದ ಫಾರ್ಮ್ ಹೌಸ್ ನಲ್ಲಿ ಈ ಶೋಧ ಕಾರ್ಯ ನಡೆದಿತ್ತು. ಡಿಎಚ್ಒ ಮಹೇಶ್ ಕೋಣಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ, ತಹಶಿಲ್ದಾರ್, ಡಿವೈಎಸ್ ಪಿ ಸಮ್ಮುಖದಲ್ಲಿ ನಕಲಿ ವೈದ್ಯನ ಸಹಾಯ ರೋಹಿತ್ ತೋರಿಸಿದ ಜಾಗದಲ್ಲಿ ಮೂರು ನವಜಾತ ಶಿಶಿಗಳು ಸಿಕ್ಕಿದ್ದವು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಮತ್ತು ಪೊಲೀಸರು ಮಕ್ಕಳ ಮಾರಾಟ ಜಾಲದಲ್ಲಿ ಹಿಂಡಲಗಾ ಜೈಲು ಸೇರಿದ್ದ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಕಸ್ಟಡಿಗೆ ಪಡೆದುಕೊಂಡರು. ಕೋರ್ಟ್ ನಲ್ಲಿ ಮನವಿ ಮಾಡಿಕೊಂಡು ಕಸ್ಟಡಿಗೆ ಪಡೆದು ಬಳಿಕ ಆತನ ಜನ್ಮ ಜಾಲಾಡುತ್ತಿದ್ದಾರೆ.