ನವದೆಹಲಿ: ದೆಹಲಿ (Delhi) ಸಮೀಪದ ಘಾಜಿಯಾಬಾದ್ನ (Ghaziabad) ಹೌಸಿಂಗ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಸೆಕ್ಯುರಿಟಿ ಗಾರ್ಡ್ (Security Guard) ಮೇಲೆ ಆಕೆಯ ಮೇಲ್ವಿಚಾರಕ ಮತ್ತು ಇತರ ಇಬ್ಬರು ಗಾರ್ಡ್ಗಳು ಸಾಮೂಹಿಕ ಅತ್ಯಾಚಾರ (Rape) ಮಾಡಿ ಥಳಿಸಿದ ಪರಿಣಾಮ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿತ್ರಾಣಗೊಂಡಿರುವ ಸಂತ್ರಸ್ತ ಯುವತಿಯನ್ನು ಅತ್ಯಾಚಾರ ಮಾಡಿ ಬಳಿಕ ಮೂವರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಅವಳನ್ನು ಗಾಜಿಯಾಬಾದ್ ಬದಲಿಗೆ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಂಧನದಿಂದ ತಪ್ಪಿಸಿ ಪರಾರಿಯಾಗಿದ್ದರು. ಆದಾಗ್ಯೂ ಪ್ರಮುಖ ಆರೋಪಿ ಅಜಯ್ (32) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಡರಾತ್ರಿ ಯುವತಿಯ ಆರೋಗ್ಯದಲ್ಲಿ ಏರುಪೇರದ ಹಿನ್ನೆಲೆ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಯುವತಿ ಜಾರ್ಖಂಡ್ಗೆ ಸೇರಿದವರಾಗಿದ್ದು, ಹೌಸಿಂಗ್ ಸೊಸೈಟಿಯ ಬಳಿ ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇಲ್ವಿಚಾರಕರು ಮತ್ತು ಇತರ ಇಬ್ಬರು ಗಾರ್ಡ್ಗಳು ಆಕೆಯನ್ನು ಥಳಿಸಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ನಂತರ ಆಕೆ ಪ್ರತಿಭಟಿಸಲು ಮುಂದಾದಾಗ ಮೂವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಆರೋಪಿ ತಪ್ಪಿಸಿಕೊಳ್ಳಲು ಇತರ ಸಹೋದ್ಯೋಗಿಗಳು ಸಹಾಯ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.