ಸಿನಿಮಾ ಹಾಗೂ ನಾಟಕಗಳಲ್ಲಿ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಮಂಗಳೂರಿನ ದೈವಾರಾಧಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
`ಕಾಂತಾರ’ ಚಿತ್ರದಲ್ಲಿ ದೈವದ ಅಣುಕು ವೇಷ ಹಾಕಿರುವ ನಟ ರಿಷಬ್ ಶೆಟ್ಟಿ, `ಶಿವದೂತೆ ಗುಳಿಗೆ’ ನಾಟಕದಲ್ಲಿ ದೈವದ ಅಣುಕು ವೇಷ ಧರಿಸಿದ ಸ್ವರಾಜ್ ಹಾಗೂ `ಕಾವೇರಿ’ ಧಾರಾವಾಹಿಯ ಸಿ.ಕೆ ಪ್ರಶಾಂತ್ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ.
ದೈವಾರಾಧಕರ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಇನ್ನು ಮುಂದೆ ಟಿವಿ, ಸಿನೆಮಾ ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು. ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಮುತ್ತಿಗೆ ಹಾಕುತ್ತೇವೆ. ಈ ಬಗ್ಗೆ ರಿಷಬ್ ಶೆಟ್ಟಿಗೂ ಎಚ್ಚರಿಕೆ ನೀಡುತ್ತೇವೆ ಎಂದು ಬಜರಂಗದಳದ ಮುಖಂಡ ಶರಣ ಪಂಪ್ವೆಲ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳ್ತಂಗಡಿ ನಳಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಾಭಾಕರ್, ತುಳುನಾಡಿನಲ್ಲಿ ಹುಟ್ಟಿ ತುಳುನಾಡು ದೈವಕ್ಕೆ ಅಪಮಾನ ಮಾಡುತ್ತಿದ್ದಾರೆ ಅಂದ್ರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಮೂಲ ಪರಂಪರೆಯಿಂದ ನಾವು ಮಾಡಿಕೊಂಡು ಬಂದ ಚಾಕರಿ ಅದರೂ ದೈವದ ಚಾಕರಿಯನ್ನು ಮಾಡಿದವರೇ ಮಾಡಬೇಕು. ಆದ್ರೆ ದೈವದ ಬಣ್ಣ ಹಚ್ಚಿ, ಗಗ್ಗರ ಕಟ್ಟಿಕೊಂಡು ಇಷ್ಟಬಂದಂತೆ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲೂ ಮಾಡಿದ್ದಾರೆ. ಅವರಿಗೆ ಏನು ನೈತಿಕತೆ ಇದೆ? ನಮ್ಮ ದೈವವನ್ನು ಬೀದಿಬದಿಗೆಲ್ಲ ಕೊಂಡೊಯ್ದು ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಗುಳಿಗ ದೈವ ನಂಬಿಕೆ ಇರುವ ಸ್ಥಳ. ಇನ್ನೂ ಕಾಂತಾರ-2 ಬರುತ್ತಿದೆ. ಯಾವ ಕಾಂತಾರ ಸಿನಿಮಾ ಬಂದರೂ ನಾವು ಹೋರಾಟಕ್ಕೆ ಇಳಿಯೋದೆ. ಇವರು ದುಡ್ಡು ಮಾಡುವುದಿದ್ದರೆ, ದೇಶದಲ್ಲಿ ಎಷ್ಟೊಂದು ಸಮಸ್ಯೆಗಳಿವೆ, ಅವುಗಳನ್ನಿಟ್ಟುಕೊಂಡು ಮಾಡಲಿ. ವಿಷ್ಣುವರ್ಧನ್ ಅವರು ಸಿನಿಮಾ ಮಾಡಿದ್ದರು. ಆದ್ರೆ ಯಾವೊಂದು ಸಮಾಜಕ್ಕೆ ಅನ್ಯಾಯ ಆಗುವ ರೀತಿಯಲ್ಲಿ ಮಾಡಲಿಲ್ಲ. ಇದು ಮುಂದುವರಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.