ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ತಂಡದಿಂದ ಹೊರಬಿದ್ದ ಕರೀಂ ಬೆಂಜೆಮಾ ಫಿಫಾ

ಕ್ರೀಡೆ

ತಮ್ಮ ಜೀವನದ ಬಹುತೇಕ ಕೊನೆಯ ವಿಶ್ವಕಪ್‌ ಆಡುವ ಸಲುವಾಗಿ ಕತಾರ್‌ಗೆ ಬಂದಿದ್ದ ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡದ ಅನುಭವಿ ಸ್ಟ್ರೈಕರ್ ಕರೀಂ ಬೆಂಜೆಮಾ ಅವರ ಸಸಕನಸು ಭಗ್ನವಾಗಿದೆ. ತಂಡದ ಅಭ್ಯಾಸದ ಅವಧಿಯಲ್ಲಿ ತೊಡೆಗೆ ಗಾಯ ಮಾಡಿಕೊಂಡಿರುವ ಕರೀಂ ಬೆಂಜೆಮಾ ಸಂಪೂರ್ಣ ಫಿಫಾ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಸ್ಪೇನ್‌ನ ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ನ ಆಟಗಾರನಾಗಿರುವ 34 ವರ್ಷದ ಕರೀಂ ಬೆಂಜೆಮಾ,  ಮಧ್ಯಪ್ರಾಚ್ಯದ ರಾಷ್ಟ್ರದಲ್ಲಿ ತಮ್ಮ ಮೊದಲ ಪೂರ್ಣ ಪ್ರಮಾಣದ ಅಭ್ಯಾಸದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಗಾಯಗೊಂಡಿದ್ದಾರೆ.

ಬಳಿಕ ಅವರನ್ನು ದೋಹಾದಲ್ಲಿ ಸ್ಕ್ಯಾನಿಂಗ್‌ಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮಂಗಳವಾರದ ಅಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯಕ್ಕೆ ಫಿಟ್‌ ಆಗಲಿಕ್ಕಿಲ್ಲ ಎಂದು ಕರೀಂ ಬೆಂಜೆಮಾ ಅಂದುಕೊಂಡಿದ್ದರು. ಆದರೆ, ಅವರ ಗಾಯ ಗಂಭೀರ ಪ್ರಮಾಣದಲ್ಲಿರುವ ಕಾರಣ ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅದರೊಂದಿಗೆ ಅವರ ವಿಶ್ವಕಪ್‌ ಕನಸು ಕೂಡ ಮುಕ್ತಾಯವಾಗಿದೆ. ಫ್ರಾನ್ಸ್‌ ಫುಟ್‌ಬಾಲ್‌ ಸಂಸ್ಥೆ ಕೂಡ ಕರೀಂ ಬೆಂಜೆಮಾ ಟೂರ್ನಿಗೆ ಅಲಭ್ಯರಾಗಿರುವುದನ್ನು ಖಚಿತಪಡಿಸಿದ್ದು, ಕನಿಷ್ಠ ಮೂರು ವಾರಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದಿದೆ.

ಫ್ರಾನ್ಸ್‌ ಫುಟ್‌ಬಾಲ್‌ ಸಂಸ್ಥೆ ಸುದ್ದಿ ಖಚಿತಪಡಿಸುತ್ತಿದ್ದಂತೆ ಇನ್ಸ್‌ಟಾಗ್ರಾಮ್‌ನಲ್ಲಿ ಇದರ ಮಾಹಿತಿ ನೀಡಿರುವ ಕರೀಂ ಬೆಂಜೆಮಾ, ನಮ್ಮ ತಂಡದ ಟ್ರೋಫಿ ಉಳಿಸಿಕೊಳ್ಳುವ ಅರ್ಹ ವ್ಯಕ್ತಿಗೆ ನನ್ನ ಸ್ಥಾನವನ್ನು ಬಿಟ್ಟುಕೊಡುವುದು ಸೂಕ್ತ ಎಂದು ಕಾಣುತ್ತಿದೆ. ಆ ಮೂಲಕ ವಿಶ್ವಕಪ್‌ಅನ್ನು ತೊರೆಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.ನನ್ನ ಇಡೀ ಜೀವನದಲ್ಲಿ ಯಾವುದನ್ನೂ ಕೂಡ ಸುಮ್ಮನೆ ಬಿಟ್ಟುಕೊಟ್ಟಿಲ್ಲ. ಆದರೆ, ಈಗ ನಾನು ತಂಡದ ಕುರಿತಾಗಿ ಯೋಚನೆ ಮಾಡಬೇಕಾದ ಸಮಯ ಬಂದಿದೆ. ತಂಡ ವಿಶ್ವಕಪ್‌ನಲ್ಲಿ ಉತ್ತಮ ಸಾಧನೆ ಮಾಡಬೇಕು ಹಾಗಾಗಿ ನನ್ನ ಸ್ಥಾನವನ್ನು ಬಿಟ್ಟುಕೊಡಲು ನಿರ್ಧರಿಸಿದ್ದೇನೆ. ನಿಮ್ಮೆಲ್ಲಾ ಸಂದೇಶಗಳು ಹಾಗೂ ಬೆಂಬಲಕ್ಕೆ ಆಭಾರಿಯಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.