ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಬಾಲಿವುಡ್ ನಟಿ ತಾಪ್ಸಿ ಪನ್ನು ವಿರುದ್ಧ ಮಧ್ಯ ಪ್ರದೇಶದ ಇಂದೋರ್ ನಲ್ಲಿ ದೂರು ದಾಖಲಾಗಿದೆ. ನಟಿಯ ವಿರುದ್ಧ ಬಿ.ಜೆಪಿ ಶಾಸಕಿ ಮಾಲಿನಿ ಗೌರ್ ಪುತ್ರ ಏಕಲವ್ಯ ಸಿಂಗ್ ಗೌರ್ ದೂರು ನೀಡಿದ್ದಾರೆ.
ಸಿನಿಮಾಗಳ ಜೊತೆ ಜೊತೆಗೆ ತಮ್ಮ ನೇರ ನುಡಿಗಳ ಕಾರಣದಿಂದಾಗಿ ತಾಪ್ಸಿ ಆಗಾಗ್ಗೆ ವಿವಾದಕ್ಕೆ ಸಿಲುಕಿಕೊಳ್ಳುತ್ತಾರೆ. ಆದ್ರೆ ಈ ಬಾರಿ ತಾಪ್ಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎನ್ನುವ ಆರೋಪಕ್ಕೆ ತುತ್ತಾಗಿದ್ದಾರೆ. ಎದೆ ಸೀಳು ಕಾಣಿಸುವ ರೀತಿಯಲ್ಲಿ ಬಟ್ಟೆ ಧರಿಸಿರುವ ತಾಪ್ಸಿ ಬಟ್ಟೆಯ ಮೇಲೆ ಲಕ್ಷ್ಮೀ ಚಿತ್ರ ಇರುವ ನಕ್ಲೇಸ್ ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಮುಂಬೈನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗಿದ್ದ ತಾಪ್ಸಿ, ರಾಂಪ್ ವಾಕ್ ಮಾಡಿದ್ದರು. ಕೆಂಪು ಬಣ್ಣದ ಗೌನ್ ಧರಿಸಿದ್ದ ನಟಿ ಆ ಕಾಸ್ಟ್ಯೂಮ್ ನೊಂದಿಗೆ ಲಕ್ಷ್ಮಿ ಚಿತ್ರ ಇರುವ ನಕ್ಲೇಸ್ ಹಾಕಿಕೊಂಡಿದ್ದರು. ಈ ಫೋಟೋ ಸಾಕಷ್ಟು ಟ್ರೋಲ್ ಕೂಡ ಆಗಿದ್ದು, ನೆಟ್ಟಿಗರು ಕೂಡ ನಟಿಯನ್ನು ತರಾಟೆಗೆ ತಗೆದುಕೊಂಡಿದ್ದರು. ಅಶ್ಲೀಲ ಬಟ್ಟೆ ಜೊತೆ ಲಕ್ಷ್ಮೀ ಧರಿಸುವುದು ಶೋಭೆ ಅಲ್ಲಅಂತ ಕಾಮೆಂಟ್ ಮಾಡಿದ್ದರು.
ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಹಿಂದ್ ರಕ್ಷಕ್ ಸಂಘಟನೆಯ ಏಕಲವ್ಯ ಸಿಂಗ್ ಗೌರ ಇಂದೋರ್ ನಲ್ಲಿ ದೂರು ದಾಖಲಿಸಿ ನಟಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.