ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ರವೀನಾ ಟಂಡನ್ ಪ್ರಯಾಣಿಸುತ್ತಿದ್ದ ಕಾರು ದಾರಿ ಹೋಕರಿಗೆ ಡಿಕ್ಕಿ ಹೊಡೆದಿತ್ತು ಎಂದು ಸುದ್ದಿಯಾಗಿತ್ತು. ಈ ವೇಳೆ ರವೀನಾ ಮೇಲೆ ಕೆಲವರು ಹಲ್ಲೆ ಮಾಡಿದ್ದರು. ಆ ಸಂದರ್ಭದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ವಿಡಿಯೋ ಹಂಚಿಕೊಂಡ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕ್ಕದ್ದಮ್ಮೆ ಹೂಡಲಾಗಿದೆ.
ಕೇವಲ ರವೀನಾ ಟಂಡನ್ ಅವರ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕೆ ಆ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ ಆ ವಿಡಿಯೋದ ಜೊತೆ ನೀಡಿದ ಕ್ಯಾಪ್ಷನ್ನಿಂದ ನಟಿಗೆ ಸಿಟ್ಟು ಬಂದಿದೆ. ರವೀನಾ ಟಂಡನ್ ಅವರು ಮದ್ಯಪಾನ ಮಾಡಿದ್ದಾರೆ, ರ್ಯಾಶ್ ಡ್ರೈವಿಂಗ್ ಮಾಡಿದ್ದಾರೆ ಹಾಗೂ ಜನರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕ್ಯಾಪ್ಷನ್ನಲ್ಲಿ ಆರೋಪಿಸಲಾಗಿತ್ತು.
ರವೀನಾ ಟಂಡನ್ ಮೇಲೆ ಕೇಳಿಬಂದ ಈ ಆರೋಪಗಳೆಲ್ಲ ಸುಳ್ಳು ಎಂದು ನಂತರದಲ್ಲಿ ಪೊಲೀಸರು ಹೇಳಿಕೆ ನೀಡಿದರು. ಆ ಬಳಿಕ ವೈರಲ್ ವಿಡಿಯೋವನ್ನು ಡಿಲೀಟ್ ಮಾಡುವಂತೆ ಆ ವ್ಯಕ್ತಿಗೆ ಮನವಿ ಮಾಡಿಕೊಳ್ಳಲಾಯಿತು. ಆದರೆ ವಿಡಿಯೋ ಡಿಲೀಟ್ ಮಾಡಲು ಆತ ಒಪ್ಪಿಲ್ಲ. ಆದ್ದರಿಂದ ಕಾನೂನಿನ ಮೂಲಕ ಬುದ್ಧಿ ಕಲಿಸಲು ರವೀನಾ ಟಂಡನ್ ಮುಂದಾಗಿದ್ದಾರೆ.