ಉಡುಪಿ: ಉಡುಪಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಖಾಸಗಿ ವಿಡಿಯೋ ಸೆರೆ ಪ್ರಕರಣದಲ್ಲಿ ಈವರೆಗೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಈ ಪ್ರಕರಣಕ್ಕೆ ಕೋಮುಬಣ್ಣ ಬಳಿಯಬೇಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಷ್ಬೂ ಸುಂದರ್ ತಿಳಿಸಿದರು. ಪ್ರಕರಣದ ತನಿಖೆಗೆಂದು ರಾಷ್ಟ್ರೀಯ ಮಹಿಳಾ ಆಯೋಗ ಮುಂದಾಗಿದೆ. ಅದರ ಭಾಗವಾಗಿ ನಟಿ ಹಾಗೂ ಆಯೋಗದ ದಕ್ಷಿಣ ಭಾರತದ ಮಹಿಳಾ ಸದಸ್ಯೆ ಖುಷ್ಬೂ ಸುಂದರ್ ಉಡುಪಿಗೆ ಭೇಟಿ ನೀಡಿ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೊಲೀಸರು ಕಳೆದ ಎರಡು ದಿನದ ತನಿಖೆಯ ಹಾಗೂ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖುಷ್ಬೂ ಸುಂದರ್ ಅವರು, ” ಖಾಸಗಿ ವಿಡಿಯೋ ಮಾಡಿದ್ದಾರೆ ಎನ್ನಲಾದ ಆರೋಪಿತ ಮೂವರು ವಿದ್ಯಾರ್ಥಿನಿಯರ ಮೊಬೈಲ್ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದು ಪರೀಕ್ಷೆ ಮಾಡಿದ್ದು, ಏನು ಪತ್ತೆಯಾಗಿಲ್ಲ. ಮೂರು ಮೊಬೈಲ್ಗಳ ಡೇಟಾ ಸಂಗ್ರಹ ಮಾಡಿದ್ದಾರೆ. ಜತೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿನ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಬಹುದು ಎಂದರು.