ಬೆಳಗಾವಿ: ಆಗಸ್ಟ್ನಿಂದ ಗೃಹಲಕ್ಷ್ಮಿ (Gruhalakshmi) ಯೋಜನೆ ಮನೆಯ ಯಜಮಾನಿಗೆ ಸಿಗುತ್ತದೆ. ಕೊಟ್ಟ ಭಾಷೆ ಉಳಿಸಿಕೊಳ್ಳುತ್ತಿದ್ದೇವೆ. ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರ ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯಲ್ಲಿ (Belagavi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 14ರಿಂದ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಶುರು ಬಗ್ಗೆ ಮಾತನಾಡಿಕೊಂಡಿದ್ದೇವೆ. ಜುಲೈ 3 ಅಥವಾ 4ನೇ ತಾರೀಖು ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದರು. ರಾಜ್ಯ ಕಾಂಗ್ರೆಸ್ (Congress) ಸರ್ಕಾರದಲ್ಲಿ ವೈಎಸ್ಟಿ (YST) ಸಂಗ್ರಹ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,
ಕುಮಾರಸ್ವಾಮಿಯವರು (H.D.Kumaraswamy) ಕೂಡಾ ಸರ್ಕಾರ ನಡೆಸಿದಂತ ಅನುಭವ ಇದ್ದವರು. ಕುಮಾರಸ್ವಾಮಿ ಅಣ್ಣ ಹಿರಿಯರು, ರಾಜಕೀಯ ಮುತ್ಸದ್ಧಿಗಳು. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಸರ್ಕಾರ ರಚನೆ ಆಗಿ ಈಗ ಒಂದು ತಿಂಗಳು ಐದು ದಿನ ಆಗಿದೆ. ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ ಎಂದು ನಯವಾಗಿ ತಿರುಗೇಟು ನೀಡಿದರು.
ಜನರು ಬಹಳಷ್ಟು ಆಶಾಭಾವನೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಈಗಲೇ ನೀವು ಈ ರೀತಿ ಮಾತನಾಡಲು ಶುರು ಮಾಡಿದರೆ ಅದು ತಪ್ಪಾಗುತ್ತದೆ. ಸ್ವಲ್ಪ ಸಮಯ ಕೊಡಿ ಎಂದರು. ಪಕ್ಷದವರು ಹತಾಶರಾಗಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹತಾಶರಾಗಿದ್ದಾರೆ ಎಂದು ನಾನು ಹೇಳಲು ಬಯಸುವುದಿಲ್ಲ.
ಬಹಳ ನಿರೀಕ್ಷೆ ಇಟ್ಟುಕೊಂಡು ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಕೆಲಸ ಮಾಡಲು ನಮಗೆ ಸಮಯಾವಕಾಶ ನೀಡಿ ಎಂದು ಕೇಳುತ್ತಿದ್ದೇನೆ. ಯಾವುದೇ ಗ್ಯಾರಂಟಿ ಆಗಲಿ, ನಮಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಆದರೂ ನಾವು ದುಡ್ಡು ಕೊಟ್ಟು ನಮ್ಮ ಭಾಷೆ ಉಳಿಸಿಕೊಳ್ಳುತ್ತಿದ್ದೇವೆ. ಈ ತಿಂಗಳಿಂದ ಗೃಹಜ್ಯೋತಿ, ಅನ್ನಭಾಗ್ಯ ಲಾಭ ಎಲ್ಲರಿಗೂ ಸಿಗುತ್ತದೆ ಎಂದು ಭರವಸೆ ನೀಡಿದರು.