ಬೆಂಗಳೂರು: ಐದು ಗ್ಯಾರಂಟಿಗಳನ್ನು ಈಡೇರಿಸುವುದು ಆರ್ಥಿಕವಾಗಿ ಕಷ್ಟಕರ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಆರ್ ಟಿ ನಗರದಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆ, ಪ್ರಚಾರ ಭಾಷಣದಲ್ಲಿ ಐದು ಗ್ಯಾರಂಟಿಗಳ ಕುರಿತು ಜನರಿಗೆ ಆಶ್ವಾಸನೆ ಕೊಡುವಾಗ ಕಾಂಗ್ರೆಸ್ನವರಿಗೆ ಸ್ಪಷ್ಟತೆಯಿತ್ತು.
ಅಧಿಕಾರಕ್ಕೆ ಬಂದ ಮೇಲೆ ಅನುಷ್ಠಾನಕ್ಕೆ ಅಸ್ಪಷ್ಟತೆ ಕಾಡತೊಡಗಿದೆ ಎಂದರು. ಐದು ಗ್ಯಾರಂಟಿಗಳನ್ನು ಈಡೇರಿಸುವುದು ಆರ್ಥಿಕವಾಗಿ ಕಷ್ಟಕರ, ಕಾರ್ಯಸಾಧುವಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಹತಾಶರಾಗಿ ಜನರನ್ನು ಯಾಮಾರಿಸಲು ನನಗೂ ನಿನಗೂ ಎಲ್ಲರಿಗೂ ಗ್ಯಾರಂಟಿ ಎಂದು ಕಾಂಗ್ರೆಸ್ ನಾಯಕರು ಅಬ್ಬರಿಸಿದರು ಎಂದು ತಿವಿದರು.
ಗ್ಯಾರಂಟಿಗಳ ಅನುಷ್ಠಾನ ಸಂಬಂಧ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. ಆರ್ಥಿಕ ಹೊರೆ ಹೆಚ್ಚಲಿದೆ, ಕೆಲವೊಂದು ಅಭಿವೃದ್ಧಿ ಕೆಲಸ ನಿಲ್ಲಿಸಬೇಕಾಗುತ್ತದೆ ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾದ ಮಾಹಿತಿಯಿದೆ. ಕರಾರು, ಇತಿಮಿತಿ, ಮಾನದಂಡ ವಿಧಿಸುವ ಮಾತುಗಳು ಕೇಳಿಬರುತ್ತಿವೆ.
ಇವೆಲ್ಲವುಗಳ ಒಟ್ಟು ಫಲಶೃತಿಯೆಂದರೆ ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟ ಮಾತಿನಂತೆ ನಡೆಯುವುದು ಅನುಮಾನ. ಜೂ.1ರಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದಿದ್ದಾರೆ, ಅನುಷ್ಠಾನದ ಸ್ವರೂಪ ಹೇಗಿರುತ್ತದೆ ಕಾದು ನೋಡೋಣ. ಜನ ಸಮುದಾಯವೇ ಸೂಕ್ತ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.