ಅಮೆರಿಕದ ಲಾಸ್ ಎಂಜಲ್ಸ್ ನಲ್ಲಿ ಹಬ್ಬಿರುವ ಕಾಡ್ಗಿಚ್ಚು ಅಲ್ಲಿನ ಜನರ ನೆಮ್ಮದಿ ಕೆಡಿಸಿದೆ. ಕಾಡ್ಗಿಚ್ಚಿನಿಂದ ಈಗಾಗಲೇ ಐದು ಮಂದಿಯ ಜೀವ ಕಳೆದುಕೊಂಡಿದ್ದು ಲಕ್ಷಾಂತರ ಎಕರೆ ಕಾಡು ಸಂಪೂರ್ಣ ಆಗ್ನಿಗೆ ಆಹುತಿಯಾಗಿದೆ. ಗಂಟೆ ಗಂಟೆಗೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಹಾಲಿವುಡ್ ಹಿಲ್ ಗೂ ಬೆಂಕಿ ವ್ಯಾಪಿಸಿದೆ. ಹಾಲಿವುಡ್ ಹಿಲ್, ವಿಶ್ವ ಪ್ರಸಿದ್ಧ ಹಾಲಿವುಡ್ ನಟ, ನಟಿಯರು ಮಾತ್ರವೇ ಅಲ್ಲದೆ ವಿಶ್ವದ ಟಾಪ್ ಉದ್ಯಮಿಗಳು, ಕ್ರೀಡಾಪಟುಗಳು ವಾಸಿಸುವ ಸ್ಥಳವಾಗಿದ್ದು, ಹಾಲಿವುಡ್ ಹಿಲ್ಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಹಾಲಿವುಡ್ ನಗರದ ಬಹುತೇಕರನ್ನು ಸ್ಥಳಾಂತರ ಮಾಡಲಾಗಿದೆ.
ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರೆ ಮತ್ತು ಪಾರಿಸ್ ಹಿಲ್ಟರ್ ಅವರ ಮನೆಗಳು ಸುಟ್ಟು ಕರಕಲಾಗಿವೆ. ಹಾಲಿವುಡ್ ಹಿಲ್ಸ್ನಲ್ಲಿ ಆಯೋಜನೆ ಮಾಡಲಾಗಿದ್ದ ಒಟ್ಟು ಮೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನ ಮುಂದೂಡಲಾಗಿದ್ದು, ಮುಂದಿನ ವಾರ ನಡೆಯಬೇಕಿದ್ದ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಕೂಡ ಮುಂದಕ್ಕೆ ಹಾಕಲಾಗಿದೆ. ಸಾವಿರಾರು ಜನರು ಸದ್ಯ ಲಾಸ್ ಎಂಜಲ್ಸ್ನಿಂದ ಸ್ಥಳಾಂತರಗೊಳ್ಳುತ್ತಿದ್ದಾರೆ.
ಹಾಲಿವುಡ್ ಹಿಲ್ ಮೇಲಿರುವ ಬೃಹತ್ ಮತ್ತು ವಿಶ್ವ ಪ್ರಸಿದ್ಧವಾಗಿರುವ ‘HOLLYWOOD’ ಸೈನ್ ಬೋರ್ಡ್ಗೆ ಬೆಂಕಿ ಬಿದ್ದಿದೆ ಎಂದು ಹೇಳಲಾಗುತ್ತಿದ್ದು, ಅದರ ಕೆಲ ಚಿತ್ರಗಳು ಹರಿದಾಡುತ್ತಿವೆ. ಆದರೆ ಹಾಲಿವುಡ್ ಸೈನ್ ಬೋರ್ಡ್ಗೆ ಬೆಂಕಿ ಬಿದ್ದಿಲ್ಲ, ಈಗ ಹರಿದಾಡುತ್ತಿರುವುದು ಎಐ ಚಿತ್ರ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.
ಕಾಡ್ಗಿಚ್ಚಿಗೆ ಸುಮಾರು 1900 ಕಟ್ಟಡಗಳು ಆಹುತಿಯಾಗಿವೆ. ಬುಧವಾರ ತಡರಾತ್ರಿ ಹಾಲಿವುಡ್ ಹಿಲ್ಸ್ನಲ್ಲಿ ಹೊತ್ತಿಕೊಂಡ ಬೆಂಕಿ ಹತ್ತಿರದಲ್ಲಿಯೇ ಇರುವ ಹಾಲಿವುಡ್ ಬಾವ್ಲ್ ಹಾಗೂ ಡಾಲ್ಬಿ ಥಿಯೇಟರ್ಗೂ ವ್ಯಾಪಿಸಿದೆ. ಇದನ್ನು ಅಕಾಡಮೆಕ್ ಅವಾರ್ಡ್ನ ಮನೆಯೆಂದೇ ಕರೆಯಲಾಗುತ್ತಿತ್ತು.
ಸೆಲೆಬ್ರೆಟಿಗಳಾದ ಕ್ರಿಸ್ಟಲ್ ಮತ್ತು ಆತನ ಪತ್ನಿ ಜಾನಿಸ್ ತಮ್ಮ ಸುಂದರ ಮನೆ ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ. ಪೆಸಿಫಿಕ್ ಪಾಲಿಸೇಡ್ನ ನೆರೆಯಲ್ಲಿಯೇ ಇದ್ದ ಅವರ ಮನೆಯಲ್ಲಿ ಈ ದಂಪತಿ 45 ವರ್ಷಗಳಿಂದ ವಾಸವಿದ್ದರು. ಇದೇ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳು ಬೆಳೆದಿದ್ದರು. ನನ್ನ ಮನೆಯ ಒಂದೊಂದು ಇಂಚು ಕೂಡ ಪ್ರೀತಿಯ ಗುರುತುಗಳನ್ನು ಹೊಂದಿತ್ತು ಎಂದು ಜಾನಿಸ್ ಕಣ್ಣಿರಿಟ್ಟಿದ್ದಾರೆ.