ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಸಿನಿಮಾ ಸೆಟ್ ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಭಾನುವಾರ ತಡರಾತ್ರಿ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಶೂಟಿಂಗ್ ಗಾಗಿ ಹಾಕಿದ್ದ 6 ಕೋಟಿ ರೂಪಾಯಿಯ ಸೆಟ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಸೆಟ್ ಸಂಪೂರ್ಣವಾಗಿ ಸೆಟ್ ಸುಟ್ಟು ಭಸ್ಮವಾಗಿದ್ದು ಘಟನೆ ತಡರಾತ್ರಿ ನಡೆದ ಕಾರಣದಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಿಂದ ಎಚ್ಚೆತ್ತ ಮಂದಿ ತಕ್ಷಣವೇ ಬೆಂಕಿ ನಂದಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಸೆಟ್ ಹಾಗೂ ಶೂಟಿಂಗ್ ಗಾಗಿ ಬಳಸುತ್ತಿದ್ದ ಪರಿಕರಗಳು ಕೂಡ ಬೆಂಕಿಗೆ ಆಹುತಿಯಾಗಿವೆ ಎಂದು ಚಿತ್ರತಂಡ ತಿಳಿಸಿದೆ.
ಹರಿಹರ ವೀರ ಮಲ್ಲು ಸಿನಿಮಾಗಾಗಿ ತೆಲಂಗಾಣದ ದುಂಡಿಗಲ್ ನ ಬೀರಂಪೇಟೆಯಲ್ಲಿ ಅದ್ದೂರಿ ಸೆಟ್ ಹಾಕಲಾಗಿತ್ತು. ಸಿನಿಮಾದ ಬಹುತೇಕ ಶೂಟಿಂಗ್ ಇದೇ ಸೆಟ್ ನಲ್ಲೇ ನಡೆದಿದೆ ಎಂದು ಹೇಳಲಾಗುತ್ತಿದೆ. ಶೇಕಡಾ 75ರಷ್ಟು ಇದೇ ಸೆಟ್ ನಲ್ಲೇ ಚಿತ್ರೀಕರಣವಾಗಿದ್ದು, ಬಾಕಿ ಉಳಿದ ಚಿತ್ರೀಕರಣಕ್ಕಾಗಿ ಮತ್ತೆ ಸೆಟ್ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.
17ನೇ ಶತಮಾನದ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.