ದೀಪಾವಳಿಯ ಮೊದಲ ದಿನ ನರಕ ಚತುರ್ದಶಿಯನ್ನು ಆಚರಣೆ ಮಾಡಲಾಗುತ್ತದೆ. ಇದನ್ನು ಕೆಲವರು ಚೋಟಿ ದೀಪಾವಳಿ ಎಂದೂ ಕರೆಯುತ್ತಾರೆ. ಹಿಂದೂ ಪುರಾಣಗಳಲ್ಲಿ ಬಲಿ ಚಕ್ರವರ್ತಿ ಎಂದು ಕರೆಯಲ್ಪಡುವ ರಾಜನಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ವಿಶೇಷ ದಿನವು ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳು ಮತ್ತು ಹಬ್ಬಗಳೊಂದಿಗೆ ಸಂಬಂಧ ಹೊಂದಿದೆ.
ನರಕ ಚತುರ್ದಶಿ ಯಾವಾಗ?: ಪಂಚಾಂಗದ ಪ್ರಕಾರ, ಅಶ್ವಯುಜ ಮಹಾ ಚತುರ್ದಶಿ ತಿಥಿ ಅಕ್ಟೋಬರ್ 30ರಂದು ಮಧ್ಯಾಹ್ನ 1:15ಕ್ಕೆ ಪ್ರಾರಂಭವಾಗುತ್ತದೆ. ಅಕ್ಟೋಬರ್ 31ರಂದು 3.52ಕ್ಕೆ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಹಬ್ಬಗಳನ್ನು ಸೂರ್ಯೋದಯದ ತಿಥಿಯ ಆಧಾರದ ಮೇಲೆ ಆಚರಿಸಲಾಗುತ್ತದೆ. ನರಕ ಚತುರ್ದಶಿಯನ್ನು ಅಕ್ಟೋಬರ್ 31ರ ಗುರುವಾರ ಆಚರಿಸಬೇಕೆಂದು ಪಂಚಾಂಗಗಳು ಸೂಚಿಸುತ್ತವೆ.
ಪೂಜೆಗೆ ಮಂಗಳಕರ ಸಮಯ: ನರಕ ಚತುರ್ದಶಿಯಂದು ಪೂಜೆಗೆ ಬೆಳಿಗ್ಗೆ 5ರಿಂದ 9ರವರೆಗೆ ಮತ್ತು ನಂತರ 11ರಿಂದ ಮಧ್ಯಾಹ್ನ 1ರವರೆಗೆ ಪೂಜೆಗೆ ಶುಭ ಸಮಯ.
ಪೂಜೆಯ ವಿಧಾನ: ಸೂರ್ಯೋದಯಕ್ಕೂ ಮುನ್ನ ಎದ್ದು ಎಳ್ಳೆಣ್ಣೆಯಿಂದ ತಲೆ ಸ್ನಾನ ಮಾಡಬೇಕು. ಮನೆಯ ಮುಂದೆ ರಂಗೋಲಿ ಬಿಡಿಸಬೇಕು. ಮನೆ ಬಾಗಿಲಿಗೆ ಮಾವಿನ ತೋರಣ ಮತ್ತು ಮಾಲೆಗಳಿಂದ ಅಲಂಕರಿಸಬೇಕು. ಹೊಸ ಬಟ್ಟೆ ಧರಿಸಿ. ಈ ದಿನ ಮನೆಯಲ್ಲಿ ಎಳ್ಳೆಣ್ಣೆಯಿಂದ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿನ ಎಲ್ಲ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಮತ್ತು ಧನಾತ್ಮಕ ಶಕ್ತಿಗಳು ಬರುತ್ತವೆ ಹಾಗೂ ಲಕ್ಷ್ಮಿ ದೇವಿ ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಮನೆಯಲ್ಲಿ ಎಂದಿನಂತೆ ಇಷ್ಟ ದೇವತೆಗಳ ಪೂಜೆ ಮಾಡಬೇಕು. ದೇವರಿಗೆ ಸಾಂಪ್ರದಾಯಿಕ ನೈವೇದ್ಯಗಳನ್ನು ಸಲ್ಲಿಸಬೇಕು. ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಬಂಧು ಮಿತ್ರರೊಂದಿಗೆ ಸೇವಿಸಬೇಕು.
ಈ ದೇವರನ್ನು ಪೂಜಿಸಿ
ನರಕ ಚತುರ್ದಶಿ ದಿನದಂದು ಶಿವನನ್ನು, ಕಾಳಿ ದೇವಿಯನ್ನು, ಭಗವಾನ್ ವಾಮನನನ್ನು, ಆಂಜನೇಯ ಸ್ವಾಮಿಯನ್ನು, ಯಮದೇವನನ್ನು ಮತ್ತು ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಪೂಜೆಯಿಂದ ನಾವು ಮರಣಾನಂತರ ಸ್ವರ್ಗವನ್ನು ಪಡೆದುಕೊಳ್ಳಬಹುದು ಎನ್ನುವ ನಂಬಿಕೆಯಿದೆ.
ಅಭ್ಯಂಗ ಸ್ನಾನ ಮಾಡಿ
ಬೆಳಿಗ್ಗೆ ಬೇಗ ಎದ್ದು ಅಭ್ಯಂಗ ಸ್ನಾನ ಮಾಡುವುದರಿಂದ ಸೌಂದರ್ಯ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಈ ದಿನ, ಸೂರ್ಯೋದಯಕ್ಕೆ ಮುಂಚಿತವಾಗಿ, ಬೇವಿನಂತಹ ಕಹಿ ಎಲೆಗಳನ್ನು ಬೆರೆಸಿದ ನೀರಿನಿಂದ ಸ್ನಾನ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಒಂದು ವೇಳೆ ನಿಮಗೆ ಬೇವಿನ ಎಲೆಗಳಿಂದ ಸ್ನಾನ ಮಾಡಲು ಸಾಧ್ಯವಾಗದೇ ಇದ್ದರೆ ಶ್ರೀಗಂಧದ ಪೇಸ್ಟ್ ಅನ್ನು ಲೇಪಿಸಿ ಮತ್ತು ಅದು ಒಣಗಿದ ನಂತರ ಎಳ್ಳು ಮತ್ತು ಎಣ್ಣೆಯಿಂದ ಸ್ನಾನ ಮಾಡಿ. ಬೆಳಗಿನ ಸ್ನಾನದ ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ.
ಈ ದೇವರ ದರ್ಶನ ಮಾಡಿ
ನರಕ ಚತುರ್ದಶಿ ದಿನದಂದು ವಿಷ್ಣು ದೇವಾಲಯ ಮತ್ತು ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಮಾಡಬೇಕು. ಇದು ಪಾಪವನ್ನು ತೊಲಗಿಸಿ ಸೌಂದರ್ಯವನ್ನು ನೀಡುತ್ತದೆ.
ಯಮ ದೀಪವನ್ನು ಬೆಳಗಿ
ಅನೇಕ ಮನೆಗಳಲ್ಲಿ ಈ ದಿನ ಮನೆಯ ಹಿರಿಯರು ಒಂದು ದೀಪವನ್ನು ಹಚ್ಚಿ ಅದನ್ನು ಮನೆಯ ಮೂರು ಸುತ್ತು ಪ್ರದಕ್ಷಿಣೆ ಬರುತ್ತಾರೆ. ನಂತರ ಆ ದೀಪವನ್ನು ಮನೆಯ ಹೊರಗೆ ಇಟ್ಟು ಮನೆಯ ಎಲ್ಲಾ ಸದಸ್ಯರು ಮನೆಯ ಒಳಗೆ ಪ್ರವೇಶಿಸುತ್ತಾರೆ. ಈ ದೀಪವನ್ನು ಹೊರಗೆ ಇಟ್ಟ ಮೇಲೆ ಯಾರು ಅದನ್ನು ಹಿಂದಿರುಗಿ ನೋಡಬಾರದು ಎನ್ನುವ ನಂಬಿಕೆಯಿದೆ. ಈ ದೀಪವನ್ನೇ ಯಮ ದೀಪವೆಂದು ಕರೆಯಲಾಗುತ್ತದೆ. ಇದನ್ನು ಮನೆಯ ಸುತ್ತಲೂ ತೆಗೆದುಕೊಂಡು ಹೋಗುವುದರಿಂದ, ಎಲ್ಲಾ ದುಷ್ಟಶಕ್ತಿಗಳು ಮತ್ತು ಆಪಾದಿತ ದುಷ್ಟ ಶಕ್ತಿಗಳು ಮನೆಯಿಂದ ಹೊರಹೋಗುತ್ತವೆ ಎನ್ನುವ ನಂಬಿಕೆಯಿದೆ.
ಎಷ್ಟು ದೀಪ ಹಚ್ಚಿಡಬೇಕು..?
ನರಕ ಚತುರ್ದಶಿಯ ದಿನ ಮನೆಯಲ್ಲಿ ಮುಖ್ಯವಾಗಿ ಐದು ದೀಪಗಳನ್ನು ಹಚ್ಚುವ ಸಂಪ್ರದಾಯವಿದೆ. ಇವುಗಳಲ್ಲಿ ಒಂದು ದೀಪವನ್ನು ಮನೆಯ ಪೂಜಾ ಸ್ಥಳದಲ್ಲಿ, ಎರಡನೆಯದನ್ನು ಅಡುಗೆಮನೆಯಲ್ಲಿ, ಮೂರನೆಯದನ್ನು ನಾವು ಕುಡಿಯುವ ನೀರು ಇಡುವ ಸ್ಥಳದಲ್ಲಿ, ನಾಲ್ಕನೇ ದೀಪವನ್ನು ಅರಳಿ ಮರ ಅಥವಾ ಆಲದ ಮರದ ಕೆಳಗೆ ಇಡಬೇಕು. ಮನೆಯ ಮುಖ್ಯದ್ವಾರದಲ್ಲಿ ಐದನೇ ದೀಪವನ್ನು ಬೆಳಗಿಸಬೇಕು. ಮನೆಯ ಮುಖ್ಯದ್ವಾರದಲ್ಲಿ ಹಚ್ಚುವ ದೀಪವು ನಾಲ್ಕು ಮುಖದ ದೀಪವಾಗಿರಬೇಕು ಮತ್ತು ಅದರಲ್ಲಿ ನಾಲ್ಕು ಉದ್ದನೆಯ ಬತ್ತಿಗಳನ್ನು ಬೆಳಗಿಸಬೇಕು. ಇನ್ನೂ ಕೆಲವೆಡೆ 13 ದೀಪಗಳನ್ನು ಕೂಡ ಬೆಳಗುತ್ತಾರೆ.
ದಕ್ಷಿಣಾಭಿಮುಖವಾಗಿ ದೀಪ
ಈ ದಿನ ಯಮನನ್ನು ಪೂಜಿಸಿದ ನಂತರ, ಸಂಜೆ ಹೊಸ್ತಿಲಲ್ಲಿ ಅವನಿಗೆ ದೀಪಗಳನ್ನು ಬೆಳಗಿಸಲಾಗುತ್ತದೆ. ಇದು ವ್ಯಕ್ತಿಗೆ ಎದುರಾಗುವ ಅಕಾಲಿಕ ಮರಣವನ್ನು ತಡೆಯುತ್ತದೆ. ಈ ದಿನ, ಸೂರ್ಯಾಸ್ತದ ನಂತರ ಜನರು ತಮ್ಮ ಮನೆಗಳ ಬಾಗಿಲುಗಳಲ್ಲಿ ಹದಿನಾಲ್ಕು ದೀಪಗಳನ್ನು ಬೆಳಗಿಸುತ್ತಾರೆ