ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಸೋಮವಾರ ಬಿಡುಗಡೆ ಆಗಲಿದೆ. ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಭಾನುವಾರ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಮೊದಲ ಪಟ್ಟಿಯಲ್ಲಿ ಅಚ್ಚರಿಯ ಹೆಸರುಗಳು ಇರಲಿದೆಯಾ? ಎಂಬುವುದು ಕೂಡಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸೋಮವಾರ ಮಧ್ಯಾಹ್ನದೊಳಗಾಗಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಗಳಿದ್ದು, ಮೊದಲ ಪಟ್ಟಿಯಲ್ಲಿ 170 ರಿಂದ 180 ಹೆಸರುಗಳು ಘೋಷಣೆ ಆಗುವ ಸಾಧ್ಯತೆಗಳು ಇವೆ ಎಂದು ತಿಳಿದುಬಂದಿದೆ.
ಹಾಲಿ ಶಾಸಕರಿಗೆ ಕೈತಪ್ಪುತ್ತಾ ಟಿಕೆಟ್?
ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಹಾಲಿ ಶಾಸಕರ ಬದಲಾಗಿ ಕೆಲವೊಂದು ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆಗಳು ಇವೆ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಸಹಜವಾಗಿ ಆದ್ಯತೆ ನೀಡಲಾಗುತ್ತದೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಿಲ್ಲ ಎಂಬುವುದನ್ನು ಘೋಷಣೆ ಮಾಡಿದ್ದಾರೆ. ಶಿಕಾರಿಪುರದಲ್ಲಿ ಅವರ ಪುತ್ರ ಬಿವೈ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ. ಇನ್ನು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಟಿಕೆಟ್ಗಾಗಿ ಪ್ರಯತ್ನ ನಡೆಸುತ್ತಿದ್ದರೂ, ಅವರ ಪುತ್ರ ಕಾಂತೇಶ್ಗೆ ಟಿಕೆಟ್ ಸಿಗುವಂತೆಯೂ ಲಾಬಿ ನಡೆಸುತ್ತಿದ್ದಾರೆ.
ಇನ್ನು ಕೂಡ್ಲಿಗಿ ಶಾಸಕರಾಗಿದ್ದ ಎನ್ ವೈ ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಸಹಜವಾಗಿ ಈ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಟಿಕೆಟ್ ಸಿಗಲಿದೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕೂಡಾ ಚುನಾವಣೆ ಸ್ಪರ್ಧೆ ಮಾಡದಿರಲು ತೀರ್ಮಾನ ಮಾಡಿದ್ದಾರೆ.
ಇನ್ನು ಮಾಜಿ ಸಚಿವ ಉಮೇಶ್ ಕತ್ತಿ, ಸವದತ್ತಿ ಕ್ಷೇತ್ರದ ಶಾಸಕರಾಗಿದ್ದ ಆನಂದ್ ಮಾಮನಿ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡುವ ಸಾಧ್ಯತೆ ಇದೆ.
ಮಾಡಾಳ್ಗೆ ಕೈತಪ್ಪಲಿದೆ ಟಿಕೆಟ್
ಭ್ರಷ್ಟಾಚಾರ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಈ ಬಾರಿ ಟಿಕೆಟ್ ನೀಡದಿರಲು ತೀರ್ಮಾನ ಮಾಡಲಾಗಿದೆ. ಒಂದು ವೇಳೆ ಟಿಕೆಟ್ ಕೊಟ್ಟಲ್ಲಿ ಅದು ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ. ಜೊತೆಗೆ ಕೆಲವು ಕ್ಷೇತ್ರಗಳ ಹಾಲಿ ಶಾಸಕರ ವಿರುದ್ಧ ಕ್ಷೇತ್ರದಲ್ಲಿ ಕಾರ್ಯಕರ್ತರಿಂದ ಅಭಿಪ್ರಾಯ ವ್ಯಕ್ತವಾಗಿದೆ.
ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಪುತ್ತೂರು ಶಾಸಕ ಸಂಜೀವ್ ಮಠಂದೂರು, ರಾಣಿಬೆನ್ನೂರು ಶಾಸಕ ಅರುಣ್ ಕುಮಾರ್, ವಿರೂಪಾಕ್ಷಕ್ಕ ಬ್ಯಾಡಗಿ, ಸಾಗರದಲ್ಲಿ ಹಾಲಪ್ಪ ಆಚಾರ್, ಸೊರಬದಲ್ಲಿ ಕುಮಾರ್ ಬಂಗಾರಪ್ಪ ಹಾಗೂ ತೆರದಾಳದಲ್ಲಿ ಸಿದ್ದು ಸವದಿ ವಿರುದ್ಧ ಕಾರ್ಯಕರ್ತರ ಅಸಮಾಧಾನವಿದೆ. ಈ ನಿಟ್ಟಿನಲ್ಲಿ ಇವರಿಗೆ ಟಿಕೆಟ್ ಸಿಗುತ್ತಾ ಎಂಬ ಕುತೂಹಲವೂ ಇದೆ. ಒಟ್ಟಿನಲ್ಲಿ ಸೋಮವಾರ ಮಧ್ಯಾಹ್ಮದ ಒಳಗಾಗಿ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದ್ದು, ಸಹಜವಾಗಿ ಕುತೂಹಲ ಕೆರಳಿಸಿದೆ.