ಕಾರವಾರ: ಲಕ್ಷಾಂತರ ರೂಪಾಯಿ ವ್ಯಯಿಸಿ ಬೋಟು, ಬಲೆ ತೆಗೆದುಕೊಂಡು ಮೀನುಗಾರಿಕೆಗೆ ತೆರಳುವವರಿಗೆ ಇದೀಗ ನೌಕಾನೆಲೆ ಅಧಿಕಾರಿಗಳು ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. ಕಾರವಾರದ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುವ ಸಣ್ಣ ಬೋಟುಗಳ ಮೀನುಗಾರರಿಗೆ ನೌಕಾಧಿಕಾರಿಗಳು ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಕರಾವಳಿ ತೀರದಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆಯೇ ಜೀವನಾಧಾರವಾಗಿದೆ. ಯಾಂತ್ರಿಕ ಮೀನುಗಾರಿಕಾ ಬೋಟುಗಳ ಮೀನುಗಾರರು ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿದ್ರೆ, ಸಣ್ಣ ಬೋಟುಗಳ ಮೀನುಗಾರರು ಸಮುದ್ರ ತೀರದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಾರೆ
ಕೆಲ ದಿನಗಳ ಹಿಂದೆ ತಾಲ್ಲೂಕಿನ ಮುದಗಾ ಭಾಗದ ಮೀನುಗಾರರು ನೌಕಾನೆಲೆ ವ್ಯಾಪ್ತಿಯಿಂದ ಸುಮಾರು ಏಳೆಂಟು ಕಿ.ಮೀ. ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಸ್ಪೀಡ್ ಬೋಟ್ನಲ್ಲಿ ಆಗಮಿಸಿದ ನೌಕಾನೆಲೆ ಅಧಿಕಾರಿಗಳು ಮೀನುಗಾರರು ಹಾಕಿದ್ದ ಬಲೆಗಳನ್ನ ತುಂಡರಿಸಿ ತೆರಳಿದ್ದಾರೆ. ಈ ಹಿಂದೆಯೂ ಸಹ ಇದೇ ರೀತಿ ಬಲೆಗಳನ್ನ ಕತ್ತರಿಸಿಹಾಕಿದ್ದು ವಿನಾಕಾರಣ ತೊಂದರೆ ನೀಡುತ್ತಿರೋದಾಗಿ ಮೀನುಗಾರರು ಆರೋಪಿಸಿದ್ದಾರೆ.
ಮೀನುಗಾರ ಮೀನುಗಾರಿಕೆಯಿಂದ ಸಿಗುವ ಅಲ್ಪ ಹಣದಲ್ಲಿ ಜೀವನ ನಡೆಸುತ್ತಿದ್ದು ಈ ರೀತಿ ಬಲೆ ಕತ್ತರಿಸಿದಲ್ಲಿ ಸಾವಿರಾರು ರೂಪಾಯಿ ನಷ್ಟ ಅನುಭವಿಸಬೇಕಾಗಿದೆ. ಹೀಗಾಗಿ ಅಧಿಕಾರಿಗಳು ನೆರವು ನೀಡಬೇಕು ಎಂದು ಮೀನುಗಾರರು ಮನವಿ ಮಾಡಿದ್ದಾರೆ