ಕೋವಿಡ್ 19 ಸಾಂಕ್ರಾಮಿಕದ ನಂತರ ಜಪಾನ್ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕು ಪತ್ತೆಯಾಗಿದೆ. ಈ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರಿಂದ ಜನ ಕಂಗಾಲಾಗಿದ್ದಾರೆ. ಒಮ್ಮೆ ಈ ಸೋಂಕು ತಗುಲಿದರೆ ಮನುಷ್ಯ 48 ಗಂಟೆಗಳಲ್ಲಿ ಸಾಯಬಹುದು ಎಂದು ವರದಿಗಳು ತಿಳಿಸಿವೆ.
ಅತ್ಯಂತ ಅಪರೂಪದ ಫ್ಲಶ್-ತಿನ್ನುವ ಬ್ಯಾಕ್ಟೀರಿಯಾ ಜಪಾನ್ನಲ್ಲಿ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಈ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ಈ ಮಾರಕ ಬ್ಯಾಕ್ಟೀರಿಯಾಗಳು ಸ್ಪೆಕ್ಟ್ರೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅನ್ನು ಉಂಟುಮಾಡುತ್ತವೆ. ಇದು ಯಾವುದೇ ಸಮಯದಲ್ಲಿ ಮಾರಕವಾಗಬಹುದು. ಸೋಂಕು ತಗುಲಿದ 48 ಗಂಟೆಗಳಲ್ಲಿ ರೋಗಿಯು ಸಾಯಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈ ವರ್ಷ 2024 ರಿಂದ ಜೂನ್ ವರೆಗೆ 977 STSS ಪ್ರಕರಣಗಳು ಜಪಾನ್ನಲ್ಲಿ ವರದಿಯಾಗಿವೆ. ಕಳೆದ ವರ್ಷ 941 ಪ್ರಕರಣಗಳು ಬೆಳಕಿಗೆ ಬಂದಿದ್ದವು. ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯ ಪ್ರಕಾರ, ಇದೇ ಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚಾದರೆ, ಈ ವರ್ಷ ಅದು 2500 ಪ್ರಕರಣಗಳನ್ನು ತಲುಪಬಹುದು. ಸಾವಿನ ಪ್ರಮಾಣ 30 ಪ್ರತಿಶತ ಹೆಚ್ಚಾಗಬಹುದು ಎನ್ನಲಾಗಿದೆ.
ಸೋಂಕಿನ ಆರಂಭದಲ್ಲಿ ಜ್ವರ ತರಹದ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಜ್ವರ, ಸ್ನಾಯು ನೋವು ಮತ್ತು ಗಂಟಲಿನ ನೋವು ಒಳಗೊಂಡಿರುತ್ತದೆ. ಅದರ ನಂತರ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ. ತೀವ್ರ ಜ್ವರ, ರಕ್ತದೊತ್ತಡ ಕುಸಿತ, ಚರ್ಮ ಕೆಂಪಾಗುವುದು ಕಂಡುಬರುತ್ತದೆ. ಇದುವರೆಗೂ ಈ ಬ್ಯಾಕ್ಟೀರಿಯಾದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಇದನ್ನು ತಡೆಗಟ್ಟಲು, ಕೈಗಳನ್ನು ನಿಯಮಿತವಾಗಿ ತೊಳೆಯುವುದು ಮತ್ತು ಯಾವುದೇ ಗಾಯವಿದ್ದರೆ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿದೆ.