ನವದೆಹಲಿ: ಪಶ್ಚಿಮ ದೆಹಲಿಯಲ್ಲಿ ಪ್ರವಾಹಕ್ಕೆ ಸಿಲುಕಿದ ನೆಲಮಾಳಿಗೆಯಲ್ಲಿ ಮೂವರು ನಾಗರಿಕ ಸೇವಾ ಆಕಾಂಕ್ಷಿ ಮೃತಪಟ್ಟ ಘಟನೆ ಬಳಿಕ ಭಾನುವಾರ ಕೋಚಿಂಗ್ ಸೆಂಟರ್ ಹೊರಗೆ ಭಾರೀ ಪ್ರತಿಭಟನೆಗೆ ಇಳಿದಿದ್ದಾರೆ.
ಏಳು ಗಂಟೆಗಳ ರಕ್ಷಣಾ ಪ್ರಯತ್ನಗಳ ನಂತರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ದೆಹಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದ ಕೋಚಿಂಗ್ ಸೆಂಟರ್ನಲ್ಲಿ ತನ್ನ ಹುಡುಕಾಟವನ್ನು ಮುಕ್ತಾಯಗೊಳಿಸಿದೆ, ಅಲ್ಲಿ ಪ್ರವಾಹದಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮಾರಣಾಂತಿಕ ಘಟನೆಗೆ ಸಂಬಂಧಿಸಿದಂತೆ ಭಾನುವಾರ ದೆಹಲಿ ಪೊಲೀಸರು ಕೋಚಿಂಗ್ ಇನ್ಸ್ಟಿಟ್ಯೂಟ್ನ ಮಾಲೀಕ ಹಾಗೂ ಸಂಯೋಜಕರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಅಪರಾಧಿ ನರಹತ್ಯೆ ಸೇರಿದಂತೆ ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದುವರೆಗೆ, ನಾವು ಇಬ್ಬರನ್ನು ಬಂಧಿಸಿದ್ದೇವೆ-ಮಾಲೀಕ ಅಭಿಷೇಕ್ ಗುಪ್ತಾ ಮತ್ತು ಕೋಚಿಂಗ್ ಸೆಂಟರ್ನ ಸಂಯೋಜಕ ದೇಶಪಾಲ್ ಸಿಂಗ್ ಬಂಧಿತರಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಎಂ ಹರ್ಷ ವರ್ಧನ್ ಹೇಳಿದ್ದಾರೆ.
ಶೋಧನೆ ಮತ್ತು ರಕ್ಷಣಾ ಕಾರ್ಯಾಚರಣೆ ಕೊನೆಗೊಂಡಿದೆ. ಒಟ್ಟು ಮೂರು ಶವಗಳನ್ನು ನೆಲಮಾಳಿಗೆಯಿಂದ ಹೊರತೆಗೆಯಲಾಗಿದೆ. ಮೃತರನ್ನು ಗುರುತಿಸಿ ಕುಟುಂಬಸ್ಥರಿಗೆ ತಿಳಿಸಿದ್ದೇವೆ ಎಂದು ದೆಹಲಿ ಪಶ್ಚಿಮ ವಲಯ ಡಿಸಿಪಿ ತಿಳಿಸಿದ್ದಾರೆ.
ನೆಲಮಾಳಿಗೆಯಲ್ಲಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಭಾನುವಾರ ಎಂಸಿಡಿ ಆಯುಕ್ತರಿಗೆ ಸೂಚಿಸಿದ್ದಾರೆ. ದುರಂತ ಘಟನೆಗೆ ಯಾವುದೇ ಎಂಸಿಡಿ ಅಧಿಕಾರಿಗಳು ಹೊಣೆಗಾರರಾಗಿದ್ದರೆ ಗುರುತಿಸಲು ತನಿಖೆ ನಡೆಸುವಂತೆ ಅವರು ಕರೆ ನೀಡಿದರು.
ಎನ್ಡಿಆರ್ಎಫ್, ಸ್ಥಳೀಯ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ರಕ್ಷಣಾ ಕಾರ್ಯಾಚರಣೆಯ ನಂತರ ಕೋಚಿಂಗ್ ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಓರ್ವ ವಿದ್ಯಾರ್ಥಿಯ ಶವಗಳನ್ನು ಹೊರತೆಗೆಯಲಾಯಿತು.
ಮೃತರನ್ನು ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಮತ್ತು ಕೇರಳದ ಎರ್ನಾಕುಲಂ ಮೂಲದ ನವೀನ್ ಡಾಲ್ವಿನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.