ನವದೆಹಲಿ:- ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ರಾತ್ರೋ ರಾತ್ರಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಕ್ಷಣಾ ಸಚಿವರ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್ನ ಮಾಧ್ಯಮ ವಿಭಾಗದ ಉಸ್ತುವಾರಿ ಡಾ. ರೀಮಾ ದಾದಾ ತಿಳಿಸಿದ್ದಾರೆ.
ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯ ನ್ಯೂರೋ ಸರ್ಜರಿ ವಿಭಾಗಕ್ಕೆ ಗುರುವಾರ ರಾತ್ರಿ ದಾಖಲಾಗಿದ್ದಾರೆ. ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಅವರು ನ್ಯೂರೋ ಸರ್ಜನ್ ಡಾ. ಅಮೋಲ್ ರಹೇಜಾ ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜನಾಥ್ ಸಿಂಗ್ ಕೇವಲ 13 ನೇ ವಯಸ್ಸಿನಲ್ಲಿ ಆರ್ಎಸ್ಎಸ್ಗೆ ಸೇರಿದರು. 1977 ರಲ್ಲಿ ಅವರು ಮಿರ್ಜಾಪುರದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಜಯಪ್ರಕಾಶ ನಾರಾಯಣ ಚಳವಳಿಯಿಂದ ಅವರು ಬಹಳ ಪ್ರಭಾವಿತರಾಗಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ರಾಜನಾಥ್ ಕೂಡ ಜೈಲಿಗೆ ಹೋಗಬೇಕಾಯಿತು. ಜೈಲಿನಿಂದ ಹೊರಬಂದ ನಂತರ ಮತ್ತೊಮ್ಮೆ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು.