ವಿಶ್ವಸಂಸ್ಥೆ: ಯುದ್ಧ, ಸಂಘರ್ಷ ಮತ್ತು ಜನರ ಹಾಗೂ ಸರಕುಗಳ ಚಲನವಲನಕ್ಕೆ ತೀವ್ರ ಅಡ್ಡಿಯ ಕಾರಣದಿಂದ ಸುಡಾನ್ ಸೇರಿದಂತೆ ವಿಶ್ವದ 4 ದೇಶಗಳಲ್ಲಿ ಆಹಾರದ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ವಿಶ್ವಸಂಸ್ಥೆಯ ಎರಡು ಏಜೆನ್ಸಿಗಳು ಎಚ್ಚರಿಕೆ ನೀಡಿವೆ.
ಸುಡಾನ್, ಹೈಟಿ, ಬುರ್ಕಿನಾ ಫಾಸೊ ಮತ್ತು ಮಾಲಿ ದೇಶಗಳು ಹಸಿವಿನ ಬಿಕ್ಕಟ್ಟು ಉಲ್ಬಣಗೊಂಡಿರುವ ದೇಶಗಳ ಪಟ್ಟಿಗೆ ಸೇರ್ಪಡೆಗೊಂಡಿವೆ. ಅಫ್ಘಾನಿಸ್ತಾನ, ನೈಜೀರಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್ ಮತ್ತು ಯೆಮೆನ್ ದೇಶಗಳು ಈಗಾಗಲೇ ಹಸಿವಿನ ಬಿಕ್ಕಟ್ಟಿನ ಅಪಾಯದಲ್ಲಿದೆ ಎಂದು ವಿಶ್ವ ಆಹಾರ ಯೋಜನೆ(ಡಬ್ಯ್ಲೂಎಫ್ಪಿ) ಹಾಗೂ `ಆಹಾರ ಮತ್ತು ಕೃಷಿ ಸಂಘಟನೆ(ಎಫ್ಒಎ)ಯ ವರದಿಯಲ್ಲಿ ಎಚ್ಚರಿಸಲಾಗಿದೆ.
ಈ 9 ದೇಶಗಳಲ್ಲದೆ, ತೀವ್ರ ಆಹಾರದ ಅಭದ್ರತೆ ಪರಿಸ್ಥಿತಿ ಇರುವ 22 ದೇಶಗಳನ್ನು ಗುರುತಿಸಲಾಗಿದ್ದು ಈ ದೇಶಗಳಿಗೆ ತಕ್ಷಣದ ಆಹಾರ ನೆರವು ಒದಗಿಸುವ ಅಗತ್ಯವಿದೆ ಎಂದು ವರದಿ ತಿಳಿಸಿದೆ.
`ಎಲ್ಲರಿಗೂ ಜಾಗತಿಕ ಆಹಾರ ಭದ್ರತೆ ಸಾಧಿಸಬೇಕಿದ್ದರೆ, ಯಾರೊಬ್ಬರೂ ನೆರವಿನಿಂದ ವಂಚಿತರಾಗಿಲ್ಲ ಎಂಬುದನ್ನು ಖಾತರಿಪಡಿಸಬೇಕಿದ್ದರೆ ತ್ವರಿತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಹಸಿವಿನ ಬಿಕ್ಕಟ್ಟಿನ ಅಪಾಯದಿಂದ ಜನರನ್ನು ತಪ್ಪಿಸಲು, ಅವರ ಬದುಕಿನ ಪುನರ್ನಿರ್ಮಾಣಕ್ಕೆ ನೆರವಾಗಲು ಮತ್ತು ಆಹಾರ ಅಭದ್ರತೆಯ ಮೂಲ ಕಾರಣಗಳನ್ನು ಕಂಡುಹಿಡಿದು ದೀರ್ಘಾವಧಿಯ ಪರಿಹಾರ ಒದಗಿಸಲು ಕೃಷಿ ವಲಯದಲ್ಲಿ ತಕ್ಷಣದ ಕ್ರಮದ ಅಗತ್ಯವಿದೆ’ ಎಂದು ಎಫ್ಎಒ ಪ್ರಧಾನ ನಿರ್ದೇಶಕ ಕ್ಯು ಡೊಂಗ್ಯು ಹೇಳಿದ್ದಾರೆ.
ಸುಡಾನ್ನ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ, ಬಡದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ವ್ಯಾಪಕಗೊಳ್ಳುವ ಸಂಭವ ಹೆಚ್ಚಿದೆ. 2023ರ ಮಧ್ಯಭಾಗದಲ್ಲಿ ಎಲ್ನಿನೊ ಹವಾಮಾನ ವಿದ್ಯಮಾನದ ಮುನ್ಸೂಚನೆಯು ದುರ್ಬಲ ದೇಶಗಳಲ್ಲಿ ಹವಾಮಾನ ವೈಪರೀತ್ಯದ ಸಮಸ್ಯೆಯನ್ನು ಪ್ರಚೋದಿಸಬಹುದು. ಸುಡಾನ್ನಲ್ಲಿ ಈಗ ನಡೆಯುತ್ತಿರುವ ಸಂಘರ್ಷದಿಂದಾಗಿ ಸುಮಾರು 1 ದಶಲಕ್ಷ ಜನತೆ ದೇಶದಿಂದ ಪಲಾಯನ ಮಾಡಬಹುದು. ಜತೆಗೆ, ಸುಡಾನ್ನ ಬಂದರಿನಿಂದ ಸರಕುಗಳ ಪೂರೈಕೆ ಮಾರ್ಗಕ್ಕೆ ಅಡ್ಡಿ ಆತಂಕ ಎದುರಾಗಿರುವುದರಿಂದ ಸುಡಾನ್ನಲ್ಲಿರುವ ಸುಮಾರು 2.5 ದಶಲಕ್ಷ ಜನತೆಗೆ ತೀವ್ರ ಆಹಾರದ ಕೊರತೆ ಎದುರಾಗಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.