ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆ 17 ರಾಜ್ಯಗಳ 111 ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ನಾಯಕರು, ಕೋರ್ಟ್ ಮಾಜಿ ನ್ಯಾಯಾಧೀಶರು, ಸಿನಿಮಾ ರಂಗದ ತಾರೆಯರು ಹಾಗೂ ಖ್ಯಾತ ಉದ್ಯಮಿಗಳಿಗೂ ಪಕ್ಷ ಟಿಕೆಟ್ ನೀಡಿದೆ.
ಈ ಪೈಕಿ ಗೋವಾದಿಂದ ಡೆಂಪೊ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕಿ ಪಲ್ಲವಿ ಡೆಂಪೊ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಗೋವಾ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯುತ್ತಿದ್ದಾರೆ.
ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊ ಯಾರು?
ಗೋವಾದ ವಾಣಿಜ್ಯೋದ್ಯಮಿ ಹಾಗೂ ಶಿಕ್ಷಣತಜ್ಞೆಯೂ ಆಗಿರುವ ಪಲ್ಲವಿ ಡೆಂಪೊ ಅವರು ಪುಣೆಯ ಎಂಐಟಿಯಿಂದ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ವ್ಯವಹಾರ ನಿರ್ವಹಣೆಯಲ್ಲಿ (ಎಂಬಿಎ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ 49 ವರ್ಷ ವಯಸ್ಸಿನ ಪಲ್ಲವಿ ಅವರು, ಡೆಂಪೊ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹಾಗೂ ಮಾಧ್ಯಮ ಮತ್ತು ರಿಯಲ್ ಎಸ್ಟೇಟ್ ವಿಭಾಗವನ್ನು ನಿರ್ವಹಣೆ ಮಾಡುತ್ತಿದ್ದಾರೆ.