ಚಿಕ್ಕಮಗಳೂರು: ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಕೊಟ್ಟ ಪರಿಣಾಮ ನೂರಾರು ಎಕರೆ ಎರಕೆ ಅರಣ್ಯ ಹೊತ್ತಿ ಉರಿದು, ಪ್ರಾಣಿಪಕ್ಷಿಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ (Fire Accident in Charmadi Ghat) ಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಗೆ ಹೊಂದಿಕೊಂಡಂತೆ ಇರುವ ಆಲೇಖಾನ್ ಹೊರಟ್ಟಿ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಕೊಟ್ಟ ಪರಿಣಾಮ ನೂರಾರು ಎಕರೆ ಅರಣ್ಯ ಹೊತ್ತಿ ಉರಿದಿದ್ದಲ್ಲದೆ ಪ್ರಾಣಿ-ಪಕ್ಷಿಗಳು ಕೂಡ ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರು ಸಾಥ್ ನೀಡಿದ್ದಾರೆ. ಗುಡ್ಡದ ಎತ್ತರದ ಪ್ರದೇಶದಲ್ಲಿ ಬೆಂಕಿ ಬಿದ್ದ ಪರಿಣಾಮ ಆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಾಹನಗಳು ಹೋಗಲು ಸಾಧ್ಯವಾಗಿಲ್ಲ. ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರು ಮರದ ರೆಂಬೆ-ಕೊಂಬೆಗಳಿಂದ ಬೆಂಕಿಯನ್ನ ಬಡಿದು ಆರಿಸಿದ್ದಾರೆ.
ಚಾರ್ಮಾಡಿ ಘಾಟಿ ದಟ್ಟ ಕಾನನ. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕೂಡಿರೋ ಅರಣ್ಯ ಬೇಸಿಗೆಯಲ್ಲಿ ಅಷ್ಟೇ ಪ್ರಮಾಣದಲ್ಲಿ ಒಣಗಿ ನಿಂತಿರುತ್ತೆ. ಯಾರೋ ಕಿಡಿಗೇಡಿಗಳು ಕೊಟ್ಟ ಬೆಂಕಿಗೆ ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅರಣ್ಯ ಹೊತ್ತಿ ಉರಿಯುತ್ತಿರುವ ದೃಶ್ಯ ಬೆಂಕಿ ಬಿದ್ದ ಜಾಗದಿಂದ ಹತ್ತಾರು ಕಿ.ಮೀ. ದೂರದ ಕೊಟ್ಟಿಗೆಹಾರಕ್ಕೂ ಕಾಣುತ್ತಿತ್ತು. ಎತ್ತರದ ಗುಡ್ಡದ ತುದಿಯಲ್ಲಿ ಬಿದ್ದ ಬೆಂಕಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಹರಸಾಹಸಪಟ್ಟು ನಂದಿಸಿದ್ದಾರೆ. ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಅಮೂಲ್ಯ ಸಂಪತ್ತು ಅರಣ್ಯಕ್ಕೆ ಬೆಂಕಿ ಕೊಡುವ ಕಿಡಿಗೇಡಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.