ಕೆಲವು ವರ್ಷಗಳ ಹಿಂದೆ ಸಖತ್ ಸದ್ದು ಮಾಡಿದ್ದ ಮೀಟೂ ವಿಷಯ ಈಗ ಮತ್ತೆ ಸುದ್ದಿಯಾಗುತ್ತಿದೆ. ಮಲಯಾಳಂ ಚಿತ್ರರಂಗದಲ್ಲಿ ಹೇಮಾ ವರದಿಯ ಬಳಿಕ ಬೇರೆ ಬೇರೆ ಭಾಷೆಯ ನಟಿಯರು ಕೂಡ ತಮ್ಮ ಮೇಲೆ ನಡೆದ, ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಕುರಿತು ಮೌನ ಮುರಿಯುತ್ತಿದ್ದಾರೆ. ಮಲಯಾಳಂ ಚಿತ್ರರಂಗದಂತೆ ತೆಲುಗು, ಕನ್ನಡ ಮುಂತಾದ ಚಿತ್ರರಂಗದಲ್ಲೂ ತನಿಖೆಗೆ ಒತ್ತಾಯ ಕೇಳಿಬಂದಿದೆ. ಫೈರ್ (ಫಿಲ್ಮ್ ಇಂಡಸ್ಟ್ರೀ ಫಾರ್ ರೈಟ್ಸ್ ಆ್ಯಂಡ್ ಇಕ್ವಾಲಿಡಿ) ಸಂಸ್ಥೆಯ ಮೂಲಕ 153 ಜನರು ಕನ್ನಡ ಚಿತ್ರರಂಗದಲ್ಲಿಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ನಟರು, ನಟಿಯರು, ಸಾಹಿತಿಗಳು, ಪತ್ರಕರ್ತರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿವಿಧ ವಿಭಾಗಗಳ ತಂತ್ರಜ್ಞರು ಸೇರಿದಂತೆ ಒಟ್ಟು 153 ಜನರು ಸಹಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಲೈಂಗಿಕ ಹಿಂಸೆಯ ಸಮಸ್ಯೆಗಳೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಫೈರ್ ಸಂಸ್ಥೆ ಮನವಿ ಮಾಡಿದೆ.
ವರದಿಯನ್ನು 3 ತಿಂಗಳ ಒಳಗೆ ಪೂರ್ಣಗೊಳಿಸಬೇಕು ಮತ್ತು ವರದಿಯ ವಿವರನ್ನು ಶೀಘ್ರವೇ ಸಾರ್ವಜನಿಕಗೊಳಿಸಬೇಕು ಎಂದು ಫೈರ್ ಸಂಸ್ಥೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ.
ಕವಿತಾ ಲಂಕೇಶ್, ಐಂದ್ರಿತಾ ರೇ, ಅಕ್ಷತಾ ಪಾಂಡವಪುರ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಅಮೃತಾ ಅಯ್ಯಂಗಾರ್, ಕಿಶೋರ್, ಕವಿರಾಜ್, ಚೈತ್ರಾ ಜೆ. ಆಚಾರ್, ಮಂಸೋರೆ, ಮೇಘನಾ ಗಾಂವ್ಕರ್, ಮಾನ್ವಿತ ಕಾಮತ್, ಪವನ್ ಕುಮಾರ್, ಪೂಜಾ ಗಾಂಧಿ, ಚೇತನ್, ಜಯತೀರ್ಥ, ಸುದೀಪ್, ರಮ್ಯಾ, ಶಾನ್ವಿ ಶ್ರೀವಾಸ್ತವ ಮುಂತಾದವರು ಪತ್ರಕ್ಕೆ ಸಹಿ ಹಾಕಿದ್ದಾರೆ. ಅತ್ತ, ಟಾಲಿವುಡ್ನಲ್ಲಿ ಕೂಡ ‘ಹೇಮಾ ಸಮಿತಿ’ ಮಾದರಿಯಲ್ಲೇ ಕಮಿಟಿ ರಚಿಸಿ ತನಿಖೆ ಮಾಡಬೇಕು ಎಂದು ಸಮಂತಾ ರುತ್ ಪ್ರಭು, ಲಕ್ಷ್ಮಿ ಮಂಚು ಮುಂತಾದವರು ಆಗ್ರಹಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಮಿಟಿ ಸ್ಥಾಪಿಸಿದರೆ ಇಲ್ಲೂ ಕೂಡ ಕೆಲವೊಂದು ತಲೆ ದಂಡಗಳು ನಡೆಯಲಿದೆ ಎನ್ನಲಾಗುತ್ತಿದೆ.