ರಾಜ್ಯ ವಿಧಾನಸಭಾ ಚುನಾವಣೆ ರಣಕಣ(Karnataka Assembly Elections) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಅಭ್ಯರ್ಥಿಗಳು ನಾನಾ ಪ್ರಯತ್ನಗಳನ್ನು ಮಾಡಿ ಮತದಾರ ಪ್ರಭುಗಳ ಮನ ಗೆಲ್ಲಲು ಕಸರತ್ತು ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ತಮ್ಮ ಪಕ್ಷದ ಬಾವುಟ ಹಾರಿಸಲೇಬೇಕೆಂದು ರಾಷ್ಟ್ರ ನಾಯಕರು ರಾಜ್ಯದತ್ತ ಮುಗಿಬಿದ್ದಿದ್ದಾರೆ. ಇಂದಿನಿಂದ ಬಿಜೆಪಿ ಅಭ್ಯರ್ಥಿಗಳ ಪರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಚಾರ ಆರಂಭಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಜಗಳೂರಿನಲ್ಲಿ ಬಿಎಸ್ವೈ(BS Yediyurappa) ರೋಡ್ ಶೋ ನಡೆಯಲಿದ್ದು ಮಧ್ಯಾಹ್ನ 3 ಗಂಟೆಗೆ ಬಾಡ ಗ್ರಾಮದಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಯಲಿದೆ. ರಾತ್ರಿ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ B.S.ಯಡಿಯೂರಪ್ಪ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 10.30ಕ್ಕೆ ಅಥಣಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ ಬಳಿಕ ನಾಳೆ ಮಧ್ಯಾಹ್ನ 1 ಗಂಟೆಗೆ ಕುಡಚಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ಮಾಡಿ ಮಧ್ಯಾಹ್ನ 3 ಗಂಟೆಗೆ ಖಾನಾಪುರದಲ್ಲಿ ಸಾರ್ವಜನಿಕ ಪ್ರಚಾರ ಸಭೆ ಮಾಡಲಿದ್ದಾರೆ.
ನಂತರ ನಾಳೆ ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿ ಏ.27ರ ಬೆಳಗ್ಗೆ 11 ಗಂಟೆಗೆ ಬಸವನಬಾಗೇವಾಡಿಯಲ್ಲಿ, ಮಧ್ಯಾಹ್ನ 12.30ಕ್ಕೆ ಮುದ್ದೇಬಿಹಾಳದಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಇಂಡಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ ಗುರುವಾರ ರಾತ್ರಿ ಕಲಬುರಗಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಇಂದು ಕೇಂದ್ರ ಸಚಿವ ಅಮಿತ್ ಶಾ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪರ ಮತಯಾಚಿಸಲಿದ್ದಾರೆ. ಯಾದಗಿರಿಯಲ್ಲಿ ರೋಡ್ಶೋ ನಡೆಸಲಿದ್ದಾರೆ. ಹಾಗೂ ಪ್ರಿಯಾಂಕಾ ಗಾಂಧಿಯವರು ಇಂದು ಚಾಮರಾಜನಗರ ಜಿಲ್ಲೆ ಹನೂರಿಗೆ ಭೇಟಿ ನೀಡಿ ಬೇಡಗಂಪಣರು, ಗಿರಿಜನ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ. ಟಿ.ನರಸೀಪುರ, ಕೆ.ಆರ್.ನಗರದಲ್ಲಿ ಪ್ರಚಾರ ಮಾಡಲಿದ್ದಾರೆ. ಮತ್ತೊಂದೆಡೆ ಹೆಚ್ಡಿ ಕುಮಾರಸ್ವಾಮಿ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಹೆಚ್ಡಿ ದೇವೇಗೌಡರು ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಲು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪ್ರಚಾರಕ್ಕಿಳಿದಿದ್ದಾರೆ.