ಬೆಂಗಳೂರು: ವಿಧಾನಸೌಧಕ್ಕೆ ಹೋಗುವಾಗ ಕೊಂದೇ ಕೊಲ್ತೀನಿ, ಇಲ್ಲ ಮನೆಯೊಳಗೆ ಬಂದು ಕೊಲೆ ಮಾಡ್ತೀನಿ ಎಂದು ಮಾಜಿ ಸಚಿವ ಗೋಪಾಲಯ್ಯಗೆ ಬೆದರಿಕೆ ಹಾಕಿದ್ದ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಬಂಧನ. ಈ ಬಗ್ಗೆ ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸ್ಪಷ್ಟ ಪಡಿಸಿದರು.
ಮಂಗಳವಾರ ರಾತ್ರಿ ಗೋಪಾಲಯ್ಯ ಮನೆ ಬಳಿ ಬಂದು ಪದ್ಮರಾಜ್ ಗಲಾಟೆ ಮಾಡಿದ್ದು, ಹಳೆ ವೈಷಮ್ಯದಿಂದ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಕಾಮಾಕ್ಷಿಪಾಳ್ಯ (Kamakshipalya) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ರಾತ್ರಿ ಮಾಜಿ ಸಚಿವ ಗೋಪಾಲಯ್ಯ ಹಾಗೂ ಮಾಜಿ ಕಾರ್ಪೊರೇಟರ್ ಪದ್ಮರಾಜ್ ನಡುವೆ ಗಲಾಟೆ ನಡೆದಿದೆ. ಇದೀಗ ಕಾಮಾಕ್ಷಿಪಾಳ್ಯ ಸ್ಟೇಶನ್ನಲ್ಲಿ ಗೋಪಾಲಯ್ಯ ಕುಳಿತಿದ್ದು, ಪದ್ಮರಾಜ್ ಮನೆ ಮುಂದೆ 4 ಹೊಯ್ಸಳ ಪೊಲೀಸರು ಜಮಾವಣೆಗೊಂಡಿದ್ದರು.
ಗೋಪಾಲಯ್ಯರವರು ಬಿಜಿಎಸ್ನಲ್ಲಿ ಪದ್ಮರಾಜ್ ಮಗಳಿಗೆ ಸೀಟ್ ಕೊಡಿಸಿದ್ದರಂತೆ. ಸಚಿವರಾಗಿದ್ದ ವೇಳೆ ರಾಜಾಜಿನಗರ ESI ಆಸ್ಪತ್ರೆಯಲ್ಲಿ ವೈದ್ಯೆ ಕೆಲಸವನ್ನು ಕೊಡಿಸಿದ್ದರಂತೆ. ಆದರೀಗ ಮಧ್ಯರಾತ್ರಿ ಮಾಜಿ ಸಚಿವ ಗೋಪಾಲಯ್ಯಗೆ ಪದ್ಮರಾಜ್ ಕರೆ ಮಾಡಿ ನನಗೆ ಹಣ ಬೇಕು ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿನ್ನೆ ರಾತ್ರಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಇಂದು ಬೆಳಗ್ಗೆ 10ಕ್ಕೆ ಸ್ಪೀಕರ್ ಯುಟಿ ಖಾದರ್ಗೆ ದೂರು ನೀಡಿ ಸದನದಲ್ಲಿ ಪ್ರಸ್ತಾಪಿಸಿದ್ದರು.