ಬೆಂಗಳೂರು: ಮಾಜಿ ಸಚಿವ ವಿ.ಸೋಮಣ್ಣ ಅವರು ತಮ್ಮ ಬೇಸರ ಹೊರ ಹಾಕುತ್ತಾ ಶೀಘ್ರವೇ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು. ಅವರು ಸ್ಪರ್ಧೆ ಮಾಡು ಎಂದರೆ ಮಾಡಬೇಕಾಗುತ್ತದೆ. ಇದೇ ಜನವರಿ 7 ಅಥವಾ 8ಕ್ಕೆ ದೆಹಲಿಗೆ ಹೋಗುತ್ತೇನೆ ಎಂದು ಸೋಮಣ್ಣ ತಿಳಿಸಿದ್ದಾರೆ.
ವಿಜಯನಗರದ ಕಚೇರಿಯಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದಿಂದ ಕ್ಯಾಲೆಂಡರ್ ಬಿಡುಗಡೆ & ಕುವೆಂಪು ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಸೋಮಣ್ಣ ಅವರು ನನಗೆ ಆಗಿರುವ ಅನಾನುಕೂಲ ಯಾರಿಗೂ ಆಗುವುದು ಬೇಡ. ಹೊಸ ವರ್ಷ ಆರಂಭವಾಗುತ್ತಿದೆ. ಹಳೆಯ ಕಹಿ ಘಟನೆ ಮರೆತು ಮುಂದೆ ಹೊಸ ವರ್ಷದಲ್ಲಿ ಮುನ್ನೆಡೆಯೋಣ ಎಂದರು.
ನನಗೆ ಆಗಿರುವ ಅನಾನುಕೂಲ ಬೇರೆ ಯಾರಿಗೂ ಆಗುವುದು ಬೇಡ ಎಂದ ಸೋಮಣ್ಣ ಅವರು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತೇನೆ. ನನಗೆ ನೇರವಾಗಿ ತೊಂದರೆ ಆಗಿದೆ. ಇದನ್ನ ಸರಿಪಡಿಸಿ ಎಂದು ಹೈಕಮಾಂಡ್ ನಾಯಕರ ಬಳಿ ಕೇಳಿದ್ದೇನೆ. ಯಾರಿಂದ ತೊಂದರೆ ಆಗಿದೆಯೋ ಅವರನ್ನ ಕರೆಸಿ ಸೂಚನೆ ಕೊಡಿಸಬೇಕು. ಬಹುಶಃ ಜನವರಿ 10ನೇ ತಾರೀಖಿನೊಳಗೆ ಎಲ್ಲವೂ ಬಗೆಹರಿಯಲಿದೆ. ನಮ್ಮ ಮೇಲೆ ಪ್ರಹಾರ ಆಗದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರಾಷ್ಟ್ರೀಯ ನಾಯಕರ ನಿಲುವೇ ನನ್ನ ನಿಲುವು. ನನ್ನ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ. ರಾಷ್ಟ್ರೀಯ ನಾಯಕರು ಏನು ಹೇಳುತ್ತಾರೋ ಹಾಗೆಯೇ ನಡೆದುಕೊಳ್ಳುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಪಕ್ಷ ಬಿಡುವುದಿಲ್ಲ ಎಂಬ ಸಂದೇಶವನ್ನು ಸೋಮಣ್ಣ ರವಾನೆ ಮಾಡಿದ್ದಾರೆ.