ತ್ರಿಪುರಾ ಮೂಲದ ಮಾಜಿ ಮಿಸ್ ಇಂಡಿಯಾ ರಿಂಕಿ ಚಕ್ಮಾ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಂಕಿ ಚಿಕತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
28 ವರ್ಷದ ರಿಂಕಿ ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರಿಂಕಿ ಶಸ್ತ್ರಚಿಕಿತ್ಸೆ ಬಳಿಕ ಚಿಕಿತ್ಸಾ ವಿಧಾನಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಅಲ್ಲದೆ ಶೀಘ್ರವೇ ಗುಣಮುಖವಾಗಿ ಮತ್ತೆ ಸಹಜ ಜೀವನಕ್ಕೆ ಮರಳುತ್ತೇನೆ ಅನ್ನೋ ಭರವಸೆಯಲ್ಲಿದ್ದರು.
ಆದ್ರೆ ಆಕೆ ಗುಣಮುಖಳಾಗುವುದಿಲ್ಲ ಎಂದು ತಿಳಿದ ನಂತರ ತನಗೆ ಸ್ಥನ ಕ್ಯಾನ್ಸರ್ ಇರೋದನ್ನ ಬಹಿರಂಗಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೆಮಿನಾ ಮಿಸ್ ಇಂಡಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಕಷ್ಟದ ಸಮಯದಲ್ಲಿ ಚಕ್ಮಾ ಕುಟುಂಬಸ್ಥರು ಹಾಗೂ ಆಪ್ತರಿಗೆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ಕೊಡಲಿ ಎಂದು ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ.
ಚಕ್ಮಾ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿತು, ತಲೆ ಭಾಗದಲ್ಲಿ ಗಡ್ಡೆ ಬೆಳೆಯಿತು. ಇದರಿಂದ ಕಿಮೋಥೆರಪಿಗೆ ಒಳಗಾಗಿದ್ದರು. ಈ ವೇಳೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಯೂ ಉಂಟಾಗಿ ಇದ್ದ ಹಣವೆಲ್ಲ ಖಾಲಿಯಾಯ್ತು. ನಂತರ ಮೆದುಳಿನ ಶಸ್ತ್ರಚಿಕಿತ್ಸೆಗಾಗಿ ದೇಣಿಗೆ ಸಂಗ್ರಹಿಸಲು ಶುರು ಮಾಡಿದರು. ಅಷ್ಟರಲ್ಲೇ ಚಕ್ಮಾ ನಿಧನರಾದರು. 2017 ರಲ್ಲಿ ರಿಂಕಿ ಚಕ್ಮಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ‘ಬ್ಯೂಟಿ ವಿತ್ ಎ ಪರ್ಪಸ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.