ಮಂಡ್ಯ :- ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುವುದರ ಬಗ್ಗೆ ಶೀಘ್ರವಾಗಿ ನನ್ನ ಅಭಿಪ್ರಾಯವನ್ನು ತಿಳಿಸಲಾಗುವುದು ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಬುಧವಾರ ತಿಳಿಸಿದರು. ಮದ್ದೂರು ಪಟ್ಟಣದ ಶ್ರೀ ಮದ್ದೂರಮ್ಮ ದೇವಸ್ಥಾನದ ಬಳಿಯಿರುವ ತಮ್ಮ ನಿವಾಸದಲ್ಲಿ ಬುಧವಾರ ತಮ್ಮ ಬೆಂಬಲಿಗರ ಹಾಗೂ ನಿತ್ಯ ಶಾಸಕ ದಿ.ಎಂ.ಎಸ್.ಸಿದ್ದರಾಜು ಅಭಿಮಾನಿಗಳ ಸಭೆ ನಡೆಸಿ ಅವರಿಂದ ಸಲಹೆ, ಮಾರ್ಗದರ್ಶಗಳನ್ನು ಪಡೆದ ನಂತರ ಮಾತನಾಡಿದರು.
ಸಭೆಯಲ್ಲಿ ಕಾರ್ಯಕರ್ತರು, ಬೆಂಬಲಿಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಶೀಘ್ರವಾಗಿ ಮತ್ತೊಮ್ಮೆ ಈ ಬಗ್ಗೆ ಪರಿಶೀಲನೆ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಲಾಗುವುದು ಎಂದರು. ಪ್ರಸ್ತುತ ನಾನು ಜೆಡಿಎಸ್ ಪಕ್ಷದಲ್ಲಿ ತಟಸ್ಥವಾಗಿದ್ದು, ನನಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದಲ್ಲೇ ಉಳಿಯುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಬಲಿಗರ ಸಭೆ ಕರೆದಿದ್ದು ಶೀಘ್ರವಾಗಿ ನನ್ನ ನಿರ್ಧಾರ ತಿಳಿಸಲಾಗುವುದು ಎಂದರು.
ಸಭೆಯಲ್ಲಿ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರ ಬೆಂಬಲಿಗರು ಮಾತನಾಡಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿ ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ಗೆಲ್ಲಿಸಲಾಗಿತ್ತು. ಆದರೆ ಶಾಸಕ ಡಿ.ಸಿ.ತಮ್ಮಣ್ಣ ಅವರು ನಿತ್ಯ ಶಾಸಕ ದಿ.ಎಂ.ಎಸ್.ಸಿದ್ದರಾಜು ಅವರ ಅಭಿಮಾನಿಗಳನ್ನು ಯಾವುದೇ ವಿಷಯದಲ್ಲೂ ಪರಿಗಣಿಸಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಟ್ಟಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತುಕೊಟ್ಟಂತೆ ಎಂ.ಎಸ್.ಸಿದ್ದರಾಜು ಅವರ ಕುಟುಂಬವನ್ನು ರಾಜಕೀಯವಾಗಿ ಬೆಳಸಿಲ್ಲ. ಮುಖ್ಯಮಂತ್ರಿಯಾಗಿದ್ದಾಗಲೂ ಕುಮಾರಸ್ವಾಮಿ ಅವರು ಕಲ್ಪನಾ ಸಿದ್ದರಾಜು ಅವರ ಕಡೆ ತಿರುಗಿಯೂ ನೋಡಿಲ್ಲ. ಪಂಚರತ್ನ ಯೋಜನೆಯ ಪ್ರಚಾರದಲ್ಲೂ ಗಣನೆಗೆ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಕೆಲವು ಬೆಂಬಲಿಗರು ರೈತ ಪರವಾದ ಜೆಡಿಎಸ್ ಪಕ್ಷದಲ್ಲೇ ನೀವು ಉಳಿದುಕೊಂಡು ಜೆಡಿಎಸ್ ಪಕ್ಷಕ್ಕೆ ಬಲ ತುಂಬುವಂತೆ ಸಲಹೆ ನೀಡಿದರು. ಅಂತಿಮವಾಗಿ ಕಲ್ಪನಾ ಸಿದ್ದರಾಜು ಅವರು ತೆಗೆದುಕೊಳ್ಳುವ ತೀಮಾರ್ನಕ್ಕೆ ನಾವೆಲ್ಲ ಬದ್ದ ಎಂದು ಸಭೆಯಲ್ಲಿದ್ದವರು ಒಕ್ಕೊರಲಿನ ತೀರ್ಮಾನ ಕೈಗೊಂಡರು. ಸಭೆಯಲ್ಲಿ ಯುವ ಮುಖಂಡ ಕಾರ್ತಿಕ್ ಸಿದ್ದರಾಜು, ಮುಖಂಡರಾದ ಧನಂಜಯ, ಬಿಪಿನ್, ಗೋವಿಂದೇಗೌಡ, ಪ್ರಸನ್ನ, ರಾಜಣ್ಣ, ಶಿವಾನಂದ್, ಎಂ.ಆರ್.ಚಿದುಕುಮಾರ್, ರಾಜೇಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.