ಬೆಂಗಳೂರು: ಮಹಿಳಾ ಮೀಸಲು ಮಸೂದೆಯನ್ನು ಜಾರಿಗೆ ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪತ್ರ ಬರೆದು ಒತ್ತಾಯಿಸಿದ್ದಾರೆ.
ಪ್ರಧಾನಿ ಪತ್ರ ಬರೆದಿರುವ ಬಗ್ಗೆ ಟ್ವೀಟ್ ಮಾಡಿರುವ ದೇವೇಗೌಡರು, ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್ನಲ್ಲಿ ಮತ್ತೆ ಮಂಡಿಸಲು ಪರಿಗಣಿಸುವಂತೆ ನಾನು ಇತ್ತೀಚೆಗೆ ಪ್ರಧಾನಿಗೆ ಪತ್ರ ಬರೆದಿದ್ದೆ. ನಾನು 1996 ರಲ್ಲಿ ಇದನ್ನು ಮೊದಲು ಕೈಗೆತ್ತಿಕೊಂಡಿದ್ದೆ. ನಾವು ಶೀಘ್ರದಲ್ಲೇ ಹೊಸ ಸಂಸತ್ತಿನ ಕಟ್ಟಡಕ್ಕೆ ತೆರಳಿದಾಗ ಇದು ಮೊದಲ ಉತ್ತಮ ಕೆಲಸವಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲೇನಿದೆ?
ಈಚೆಗೆ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಲ್ಲಿ ಮಹಿಳಾ ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಒಟ್ಟು ಮತದಾರರ ಪೈಕಿ ಮಹಿಳಾ ಮತದಾರರ ಸಂಖ್ಯೆ ಶೇ.50ಕ್ಕೆ ಹತ್ತಿರದಲ್ಲಿದೆ. ದೇಶದ ಇತರ ರಾಜ್ಯಗಳಲ್ಲೂ ಮಹಿಳಾ ಮತದಾರರ ಸಂಖ್ಯೆ ಪುರುಷರಿಗೆ ಸಮಾನವಾಗಿಯೇ ಇದೆ. ಈ ಬೆಳವಣಿಗೆಯು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂಬುದನ್ನು ಮತ್ತೆ ಪ್ರತಿಪಾದಿಸುವಂತೆ ಮಾಡಿದೆ.
ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ನಾನು 1996ರಲ್ಲಿ ಪ್ರಧಾನಿಯಾದ ಸಂದರ್ಭದಲ್ಲಿ ಮಸೂದೆಯನ್ನು ಮಂಡನೆ ಮಾಡಿದ್ದೆ. ಈ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಲು ಪ್ರಧಾನಿ ಅವರು ಪ್ರಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
2024ರ ಲೋಕಸಭಾ ಚುನಾವಣೆಗೂ ಮುನ್ನ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಬೇಕು ಎಂದು ನಾನು ನಿಮ್ಮಲ್ಲಿ ಒತ್ತಾಯಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.