ತುಮಕೂರು:- ವಿದ್ಯುತ್ ಶಾಕ್ ನಿಂದ ನಾಲ್ವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೊರಟಗೆರೆ ತಾಲೂಕಿನ ಚಿಲುಗನಹಳ್ಳಿ ಗ್ರಾಮದಲ್ಲಿ ಜರುಗಿದೆ. ಗ್ರಾಮದಲ್ಲಿನ 11 ಕೆವಿ ವಿದ್ಯುತ್ ಸಾಮರ್ಥ್ಯದ ತಂತಿ ತುಂಡಾದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆಯಿಂದ ಗ್ರಾಮದ 70 ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಭಸ್ಮವಾಗಿದೆ.
ನೂರಾರು ಮನೆಗಳ ವೈರಿಂಗ್ ಸೇರಿದಂತೆ ಗೃಹಪಯೋಗಿ ವಸ್ತುಗಳು, ವಿದ್ಯುತ್ ಮೀಟರ್ ಗಳು ಸುಟ್ಟು ಭಸ್ಮವಾಗಿದೆ. ಇನ್ನೂ ಲಕ್ಷಾಂತರ ರೂ. ಬೆಲೆಯ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾದ ಹಿನ್ನೆಲೆ ಮನೆಯ ಒಳಗೆ ಇರಲು ಜನರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಯಲ್ಲಿ ತಾಯಿ ಶಾರದಮ್ಮ ಮಗ ಮಂಜುನಾಥ್ ಸೊಸೆ ವರಲಕ್ಷ್ಮಿ ಮೊಮ್ಮಗ ದರ್ಶನ್ ವಿದ್ಯುತ್ ಶಾಕ್ ಗೆ ತುತ್ತಾದವರು ಎಂದು ಹೇಳಲಾಗಿದೆ.
ಸಧ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ನಾಲ್ವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ, ಕೊರಟಗೆರೆ ತಹಶೀಲ್ದಾರ್, ಬೆಸ್ಕಾಂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ವಿದ್ಯುತ್ ತಂತಿ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಲ್ಲದೇ ಸುಟ್ಟು ಕರಕಲಾದ ಗೃಹಪಯೋಗಿ ವಸ್ತುಗಳಿಗೆ ಶೀಘ್ರ ಪರಿಹಾರ ನೀಡೋದಾಗಿ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು. ಹಾಗೂ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ನಾಲ್ವರ ಆರೋಗ್ಯ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಅವರು ವಿಚಾರಿಸಿ ಧೈರ್ಯ ತುಂಬಿದ್ದಾರೆ.