ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ(Karnataka Election) ಕೆಲವೇ ದಿನಗಳು ಬಾಕಿ ಇದ್ದು, ರಾಜ್ಯದಲ್ಲಿ ಚುನಾವಣೆ ಕಾವು ದಿನೇ ದಿನೇ ರಂಗೇರಿದೆ. ಇದೀಗ ಚುನಾವಣೆ ಹೊತ್ತಲ್ಲೇ ವೋಟರ್ ಐಡಿ ಸಂಗ್ರಹಿಸುತ್ತಿದ್ದ ನಾಲ್ವರನ್ನ ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಭಾರತೀ ನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಮತದಾರರ ಬಳಿ ಹೋಗಿ ನಿಮ್ಮ ಒಂದು ವೋಟರ್ ಐಡಿಗೆ(Voter ID) 2 ಸಾವಿರ ರೂ. ಹಣ ಕೊಡುತ್ತೆವೆ ಎಂದು ಹೇಳಿ ವೋಟರ್ ಐಡಿ ಸಂಗ್ರಹಿಸುತ್ತಿದ್ದರು.
ಈ ಸಂಬಂಧ ಶಿವಾಜಿನಗರ ಕಾಂಗ್ರೆಸ್ ಕಾರ್ಯಕರ್ತ ದೂರು ನೀಡಿದ್ದು, ದೂರಿನ ಮೇರೆಗೆ ನಾಲ್ವರನ್ನ ವಶಕ್ಕೆ ಪಡೆಯಲಾಗಿದೆ. ಈ ವೇಳೆ 15ಕ್ಕೂ ಹೆಚ್ಚು ವೋಟರ್ ಐಡಿ, ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಪ್ರತಿ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಸಾಕಷ್ಟು ಕಸರತ್ತು ಮಾಡುತ್ತಿವೆ. 18 ವರ್ಷ ವಯಸ್ಸು ಪೂರೈಸಿದವರು ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಮತದಾನಕ್ಕೆ ಅರ್ಹರಾಗಿದ್ದಾರೆ. ಮೇ 10ರಂದು ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.