ಗಂಗಾವತಿ : – ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಗಂಗಾವತಿ ವಿಧಾನ ಸಭಾ ಕ್ಷೇತ್ರದ ನಾಲ್ಕು ಕಡೆ ಶಾಸಕರ ಕಚೇರಿಯನ್ನು ಆರಂಭಿಸಲಾಗುತ್ತದೆ ಎಂದು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ಕನಕಗಿರಿ ರಸ್ತೆಯಲ್ಲಿ ಇರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಅಭಿನಂದನ ಸಮರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು,
ಸರಕಾರದ ಕೆಲಸಗಳಿಗೆ ಜನರು ಪರದಾಡುವುದನ್ನು ತಪ್ಪಿಸಲು ಮತ್ತು ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಗಂಗಾವತಿ ತಾಲೂಕಿನ ಇರಕಲಗಡ, ಕಿನ್ನಾಳ,ಆನೆಗೊಂದಿ ಹಾಗೂ ವೆಂಕಟಗಿರಿ ಗ್ರಾಮಗಳಲ್ಲಿ ಶಾಸಕರ ಕಚೇರಿಯನ್ನು ಆರಂಭಿಸುತ್ತೇನೆ, ಈ ಮೂಲಕ ಜನರು ಪದೇ ಪದೇ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುತ್ತೇನೆ ಎಂದರು.
ಗಂಗಾವತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಬಾಗದಲ್ಲಿ ನಮಗೆ ಹೆಚ್ಚಿನ ಮತಗಳು ಬಂದಿವೆ, ನಾನು ಗೆಲ್ಲಲು ಗ್ರಾಮೀಣ ಬಾಗದ ಮತಗಳೆ ಕಾರಣ, ನಗರದಲ್ಲಿ ಮತದಾರರು ಬ್ಯಾಲೆನ್ಸ್ ಮಾಡಿದ್ದಾರೆ ಎಂದರು.ಅಷ್ಟೇ ಅಲ್ಲದೇ ಚುನಾವಣಾ ಸಂದರ್ಭದಲ್ಲಿ ತಾವು ನನ್ನ ಗಮನಕ್ಕೆ ತಂದ ಸಮಸ್ಯೆಗಳನ್ನು ತಾವು ಇದ್ದಲ್ಲಿಗೆ ಬಂದು ಬಗೆಹರಿಸುತ್ತೇನೆ ಎಂದು ತಿಳಿಸಿದರು. ಸದಾ ಜನರೊಂದಿಗೆ ಇರಲು ನಿಮ್ಮೊಂದಿಗೆ ನಾನು ಅನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಅಧಿಕಾರಿಗಳೊಟ್ಟಿಗೆ ಸೇರಿ ಮತದಾರನ ಎಲ್ಲಾ ಕೆಲಸಗಳನ್ನು ಸ್ಥಳದಲ್ಲೇ ಮಾಡಿ ಎಂದು ತಿಳಿಸಿದರು.
ಅದರ ಜೊತೆಯಲ್ಲಿ ಗಂಗಾವತಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಅಂಜನಾದ್ರಿ ದೇವಸ್ಥಾನವನ್ನು ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ. ಕ್ಷೇತ್ರದ ಜನರಿಗೆ ಮನೆಗಳನ್ನು ಕಟ್ಟಿಸಿ ಕೊಡಲಾಗುತ್ತದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲಿಲ್ಲ, ಅವರ ಗ್ಯಾರಂಟಿಗಳಿಗೆ ಮತ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಅಭಿವೃದ್ಧಿ ನೋಡಿ ಎಲ್ಲರೂ ನಮಗೆ ಮತ ಹಾಕಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ ಆರ್ ಪಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನಹೋರ ಗೌಡ, ಗ್ರಾಮೀಣ ಅಧ್ಯಕ್ಷ ದುರ್ಗಪ್ಪ,ವಿರೇಶ್ ಬಲಕುಂದಿ,ಬಸ್ಸಪ್ಪ ಸೇರಿದಂತೆ ಅನೇಕರು ಮಾತನಾಡಿದರು. ಭೀಮಾಶಂಕರ ಪಾಟೀಲ್, ಯಮನೂರು ಚೌಡಕಿ,ರಾಜೇಶ್ವರಿ, ಸಂಗಮೇಶ್,ಮಂಜುನಾಥ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು.