ಪ್ಯಾರಿಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಫ್ರಾನ್ಸ್ ಗೆ ಆಗಮಿಸಿದ್ದು ಈ ವೇಳೆ ಫ್ರಾನ್ಸ್ನ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ನೀಡಿ ಗೌರವಿಸಿದ್ದಾರೆ.
ಎರಡು ದಿನಗಳ ಭೇಟಿಗಾಗಿ ಗುರುವಾರ ಪ್ಯಾರಿಸ್ಗೆ ಆಗಮಿಸಿದ ಮೋದಿಯವರಿಗೆ ಅಲ್ಲಿನ ನಾಯಕರು ಅಭೂತಪೂರ್ವ ಸ್ವಾಗತ ನೀಡಿದರು. ಶುಕ್ರವಾರ ಪ್ರಧಾನಿಯವರು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಮ್ಯಾಕ್ರೋನ್ ಜೊತೆಗೆ ಭಾಗಿಯಾಗಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಇಲ್ಲಿನ ಎಲಿಸೀ ಅರಮನೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳನ್ನು ಟ್ವೀಟ್ ಮಾಡಿದ್ದು, “ಪಾಲುದಾರಿಕೆಯ ಮನೋಭಾವವನ್ನು ಸಾಕಾರಗೊಳಿಸುವ ಹೆಜ್ಜೆಯಿದು, ಫ್ರಾನ್ಸ್ ಅಧ್ಯಕ್ಷರಿಂದ ಅತ್ಯುನ್ನತ ಪ್ರಶಸ್ತಿ” ಎಂದು ಬರೆದುಕೊಂಡಿದ್ದಾರೆ.
“ಭಾರತದ ಜನರ ಪರವಾಗಿ ಈ ಏಕಮಾನ ಗೌರವಕ್ಕಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು” ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.ಇದಕ್ಕೂ ಮುನ್ನ ಫ್ರೆಂಚ್ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರು ಎಲಿಸೀ ಅರಮನೆಯಲ್ಲಿ ಮೋದಿ ಅವರಿಗೆ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದರು.
ಲಾ ಸೀನ್ ಮ್ಯೂಸಿಕೇಲ್ನಲ್ಲಿ ಉತ್ಸಾಹಭರಿತ ಪ್ರೇಕ್ಷಕರನ್ನು ಉದ್ದೇಶಿಸಿ ಸುಮಾರು ಒಂದು ಗಂಟೆಗಳ ಕಾಲ ಭಾಷಣ ಮಾಡಿದ ಮೋದಿ – ಸೀನ್ ನದಿಯ ದ್ವೀಪದಲ್ಲಿ ಪ್ರದರ್ಶನ ಕಲೆಯ ಕೇಂದ್ರ – ಭಾರತದ ವೇಗದ ಬೆಳವಣಿಗೆಯನ್ನು ವಿವರಿಸಿದರು. ಜಗತ್ತು ಹೊಸದತ್ತ ಸಾಗುತ್ತಿದೆ ಎಂದು ಪ್ರತಿಪಾದಿಸಿದರು. ಸುವ್ಯವಸ್ಥೆ, ಭಾರತದ ಶಕ್ತಿ ಮತ್ತು ಪಾತ್ರವೂ ಬಹಳ ಬೇಗನೆ ಬದಲಾಗುತ್ತಿದೆ ಎಂದು ತಿಳಿಸಿದರು.