ದೊಡ್ಡ ಸರಕು ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್ನ ಅತಿ ಉದ್ದದ ಫ್ರಾನ್ಸಿಸ್ ಸ್ಕಾಟ್ ಸೇತುವೆ ಕುಸಿದು ಬಿದ್ದಿದೆ. ವರದಿಗಳ ಪ್ರಕಾರ, ಸೇತುವೆ ಕುಸಿಯುವ ಮೊದಲು ಬೆಂಕಿ ಹೊತ್ತಿಕೊಂಡಿತು ಮತ್ತು ಹಲವಾರು ವಾಹನಗಳು ಕೆಳಗಿರುವ ನೀರಿನಲ್ಲಿ ಬಿದ್ದವು ಎನ್ನಲಾಗುತ್ತಿದೆ.
ಸೇತುವೆ ಕುಸಿದಾಗ ಸುಮಾರು ಏಳು ಮಂದಿ ಕಟ್ಟಡ ಕಾರ್ಮಿಕರು ಮತ್ತು ಮೂರ್ನಾಲ್ಕು ನಾಗರಿಕ ವಾಹನಗಳು ಸೇತುವೆ ಮೇಲೆ ಇದ್ದವು ಎಂದು ಹೇಳಲಾಗಿದೆ. ಘಟನೆಯ ನಂತರ ಸೇತುವೆಯನ್ನು ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿದೆ. ಸುರಕ್ಷತಾ ಕಾರಣಗಳಿಗಾಗಿ ಅಧಿಕಾರಿಗಳು ಎರಡೂ ದಿಕ್ಕುಗಳಲ್ಲಿ ಲೇನ್ಗಳನ್ನು ಮುಚ್ಚಲಾಗಿದೆ.
47 ವರ್ಷಗಳಷ್ಟು ಹಳೆಯದಾದ ಸೇತುವೆ ಇದಾಗಿದೆ. ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸಾವುನೋವುಗಳ ಕುರಿತು ಯಾವುದೇ ಮಾಹಿತಿ ವರದಿಯಾಗಿಲ್ಲ.
ಅಪಘಾತಕ್ಕೀಡಾದ ಹಡಗು ಡಾಲಿ ಹೆಸರಿನ ಕಂಟೈನರ್ ಹಡಗಾಗಿದ್ದು, ಬಾಲ್ಟಿಮೋರ್ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಹೋಗುತ್ತಿತ್ತು. ರಾತ್ರಿ 1:30ರ ಸುಮಾರಿಗೆ ಹಡಗು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಇದರ ನಂತರ ಹಡಗು ನೀರಿನಲ್ಲಿ ಮುಳುಗಿದ್ದು, ಸೇತುವೆಯೂ ಮುರಿದು ನದಿಗೆ ಬಿದ್ದಿದೆ.
ಬಾಲ್ಟಿಮೋರ್ ಬಂದರಿನಲ್ಲಿ ಪಟಾಪ್ಸ್ಕೋ ನದಿಯ ಮೇಲೆ ನಿರ್ಮಿಸಲಾಗಿರು ಈ ಸೇತುವೆಯು, ಸುಮಾರು 3 ಕಿಲೋಮೀಟರ್ ಉದ್ದವಿದೆ. ಈ ಸೇತುವೆಯ ನಿರ್ಮಾಣವು 1972 ರಲ್ಲಿ ಪ್ರಾರಂಭವಾಯಿತು ಮತ್ತು ಸೇತುವೆಯನ್ನು 1977 ರಲ್ಲಿ ಸಂಚಾರಕ್ಕೆ ತೆರೆಯಲಾಯಿತು. ಪ್ರತಿ ವರ್ಷ ಸರಾಸರಿ 1.1 ಕೋಟಿ ವಾಹನಗಳು ಈ ಸೇತುವೆಯ ಮೂಲಕ ಹಾದು ಹೋಗುತ್ತವೆ. ಈ ಸೇತುವೆಯನ್ನು ಕೀ ಸೇತುವೆ ಎಂದೂ ಕರೆಯಲಾಗುತ್ತಿತ್ತು.