ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ‘ಪುಷ್ಪ’ ಸಿನಿಮಾದಲ್ಲಿ ನಟಿಸಿದ್ದ ತೆಲುಗು ಕಲಾವಿದ ಶ್ರೀತೇಜ್ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು ನಂಬಿಸಿ 20 ಲಕ್ಷ ರೂಪಾಯಿ ಪಡೆದ ಆರೋಪವೂ ಇವರ ಮೇಲೆ ಇದೆ. ಸದ್ಯ ನಟನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಶ್ರೀತೇಜ್ ವಿರುದ್ಧ ಸಂತ್ರಸ್ತೆ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಶ್ರೀ ತೇಜ್ ಮದುವೆ ಆಗುವುದಾಗಿ ನಂಬಿಸಿದ್ದರು. ಆದರೆ, ಈಗ ಮದುವೆ ಆಗಲು ಒಪ್ಪುತ್ತಿಲ್ಲ. ಅಲ್ಲದೆ ನನಗೆ ಕಿರುಕುಳ ನೀಡಿದ್ದಾರೆ. ನನ್ನಿಂದ ಹಣ ಪಡೆದಿದ್ದಾರೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸದ್ಯ ಕ್ರಿಮಿನಲ್ ಬ್ರ್ಯಾಂಚ್ನವರು ಶ್ರೀ ತೇಜ್ನ ವಿಚಾರಣೆ ಮಾಡುತ್ತಿದ್ದಾರೆ.
ಈ ಮೊದಲು ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಗದೀಶ್ ಅವರು ಅರೆಸ್ಟ್ ಆಗಿದ್ದರು. ಜೂನಿಯರ್ ಆರ್ಟಿಸ್ಟ್ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಜೈಲು ಸೇರಿದ್ದರು. ಈ ಬೆನ್ನಲ್ಲೇ ಸಿನಿಮಾ ತಂಡದ ಮತ್ತೋರ್ವ ಕಲಾವಿದ ಬಂಧನಕ್ಕೆ ಒಳಗಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಆರೋಪಗಳು ಎದುರಾಗುತ್ತಿರುವುದರಿಂದ ಟಾಲಿವುಡ್ ಚಿತ್ರರಂಗ ತಲೆ ತಗ್ಗಿಸುವಂತೆ ಆಗಿದೆ.
ಸಂತ್ರಸ್ತೆ ಏಪ್ರಿಲ್ನಲ್ಲಿಯೂ ಶ್ರೀತೇಜ್ ವಿರುದ್ಧ ದೂರು ದಾಖಲಿಸಿದ್ದರು. ಆ ಸಮಯದಲ್ಲಿ ನಟ ಸಂತ್ರಸ್ತೆಯನ್ನು ಪುಸಲಾಯಿಸಿದ್ದ. ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದ. ಈ ಕಾರಣಕ್ಕಾಗಿ ಸಂತ್ರಸ್ತೆ ತನ್ನ ದೂರನ್ನು ಹಿಂಪಡೆದಿದ್ದರು. ಆದರೆ ಶ್ರೀತೇಜ್ ಬದಲಾಗದ ಕಾರಣ ಮತ್ತೆ ದೂರು ನೀಡಿದ್ದಾರೆ.
ಇದಕ್ಕೂ ಮುನ್ನ ಬ್ಯಾಂಕ್ ಅಧಿಕಾರಿಯೊಬ್ಬರ ಪತ್ನಿಯ ಜೊತೆ ಶ್ರೀತೇಜ್ ಅವರು ಅಕ್ರಮ ಸಂಬಂಧ ಹೊಂದಿದ್ದ ಆರೋಪ ಇತ್ತು. ನಂತರ ಮಹಿಳೆಯ ಪತಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಇದು ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು.