ತಮಿಳು ನಟ ವಿಜಯ್ ಆ್ಯಂಟನಿ ನಟಿಸಿದ್ದ ತಮಿಳ್ ಅರಸನ್ ಎಂಬ ಚಿತ್ರದ ನಿರ್ಮಾಪಕಿ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಕ್ಕೆ ರೈಟ್ಸ್ ನೀಡದೆ 16 ಲಕ್ಷ ಪಡೆದು ವಂಚನೆ ಮಾಡಿದ್ದಾರೆಂದು ಚೆನ್ನಮ್ಮನಕೆರೆ ಠಾಣೆಯಲ್ಲಿ ದೂರು ನೀಡಲಾಗಿದ್ದು, ಹೀಗಾಗಿ ಪ್ರಕರಣ ದಾಖಲಾಗಿದೆ. ಚಿತ್ರದ ನಿರ್ಮಾಪಕಿ ಕೌಸಲ್ಯ ರಾಣಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಧೀರಜ್ ಎಂಟರ್ ಪ್ರೈಸಸ್ ನ ವಿತರಕ ಮೋಹನ್ ದಾಸ್ ಪೈ ಎಂಬುವವರಿಂದ ದೂರು ನೀಡಲಾಗಿದೆ. 38 ಲಕ್ಷಕ್ಕೆ ತಮಿಳು ಹಾಗೂ ತೆಲುಗು ವರ್ಷನ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅಗ್ರಿಮೆಂಟ್ ಆಗಿತ್ತು. ಇದಕ್ಕಾಗಿ ಮುಂಗಡವಾಗಿ ಚಿತ್ರದ ನಿರ್ಮಾಪಕಿ ಕೌಸಲ್ಯ ರಾಣಿ 16 ಲಕ್ಷ ಪಡೆದಿದ್ದರು. ಉಳಿದ ಹಣ ಚಿತ್ರ ಬಿಡುಗಡೆ ಬಳಿಕ ನೀಡುವಂತೆ ಅಗ್ರಿಮೆಂಟ್ ಮಾಡಿಕೊಂಡಿದ್ರು. ಆದರೆ ಚಿತ್ರ ಬಿಡುಗಡೆಯನ್ನ ನಾನಾ ಕಾರಣದಿಂದ ಮುಂದೂಡಿ ಇತ್ತ ಹಣ ಕೂಡ ನೀಡದೆ ಸತಾಯಿಸುತ್ತಿರುವ ಆರೋಪ ನಿರ್ಮಾಪಕಿ ಮೇಲೆ ಕೇಳಿ ಬಂದಿದೆ.
ಒಟಿಟಿ ಫ್ಲಾಟ್ ಫಾರ್ಮ್ ಗೆ ಚಿತ್ರ ಮಾರಾಟ ಮಾಡಿ ಬಿಡುಗಡೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆ ನಿರ್ಮಾಪಕಿ ಕೌಸಲ್ಯ ರಾಣಿ ಮೇಲೆ ಕ್ರಮ ಕೈಗೊಳ್ಳವಂತೆ ದೂರು ನೀಡಲಾಗಿದೆ. ನ್ಯಾಯಾಲಯದ ಆದೇಶ ಹಿನ್ನಲೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.