ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಹತ್ವದ 5 ಉಚಿತ ಯೋಜನೆಗಳಲ್ಲಿ ಒಂದಾದ “ಶಕ್ತಿ ಯೋಜನೆ”ಗೆ ನಾಳೆ ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಪ್ರಯಾಣ ಮಾಡಬಹುದಾಗಿದೆ
ಮಹಿಳೆಯರಿಗೆ ನೀಡುವ ‘O’ ದರದ ಪಿಂಕ್ ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ನೀಡುವ ಮೂಲಕ ಚಾಲನೆ ದೊರೆಯಲಿದೆ. ಅಲ್ಲದೇ ನಾಳೆ ಹತ್ತರಿಂದ ಹದಿನೈದು ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ನಾಳೆಯಿಂದ ಸೇವಾಸಿಂಧು ಪೋರ್ಟಲ್ ಆರಂಭ
ನಾಳೆಯಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ. ಮಹಿಳೆಯರು ಬಿಎಂಟಿಸಿ ಹೊರತು ಪಡಿಸಿ ನಾರ್ಮಲ್ ಬಸ್ಸುಗಳಲ್ಲು ಸೀಟ್ ಬುಕ್ಕಿಂಗ್ ಮಾಡಿಕೊಂಡು ಪ್ರಯಾಣ ಮಾಡಬಹುದಾಗಿದೆ. ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆಯಲು 3 ತಿಂಗಳು ಸಮಯಾವಕಾಶವಿದೆ. 3 ತಿಂಗಳ ನಂತರ ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.
ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳೋದು ಹೇಗೆ
- ಯಾವುದಾದರೂ ಹತ್ತಿರದ ಬೆಂಗಳೂರು ಒನ್, ಸೈಬರ್ ಸೆಂಟರ್ಗೆ ಭೇಟಿ ನೀಡಿ
- ಸೇವಾ ಸಿಂಧೂ ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ
- ಆಧಾರ್ ಕಾರ್ಡ್ ಅಥವಾ ಅಡ್ರೆಸ್ ಫ್ರೂಪ್ ನೀಡಿದ್ರೆ ಸ್ಮಾರ್ಟ್ ಕಾರ್ಡ್ ಮಾಡಿಕೊಡಲಾಗುವುದು
- ಸ್ಮಾರ್ಟ್ ಕಾರ್ಡಿಗೆ ಆಗುವ ಖರ್ಚನ್ನು ಸರ್ಕಾರವೇ ಭರಿಸಲಿದೆ
ಉಚಿತ ಪ್ರಯಾಣಕ್ಕಿರುವ ನಿಯಮಗಳು
- ಮಹಿಳಾ ಪ್ರಯಾಣಿಕರು ಉಚಿತ ಲಗೇಜ್ ಮಿತಿಯನ್ನು ಹೊರತುಪಡಿಸಿ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋದಲ್ಲಿ ನಿಯಮಾನುಸಾರ ಟಿಕೆಟ್ ದರ ವಸೂಲಿ ಮಾಡಲಾಗುತ್ತದೆ.
- ಪುರುಷರಿಗೆ ಮೀಸಲಾದ ಸೀಟಿನಲ್ಲಿ ಮಹಿಳೆಯರು ಕೂತರೇ ದಂಡ ಇಲ್ಲ
- ಉಚಿತ ಬಸ್ ಪ್ರಯಾಣದ ಕಾರಣಕ್ಕೆ ಬಿಎಂಟಿಸಿ ಹೊರತುಪಡಿಸಿ ಸಾಮಾನ್ಯ ಬಸ್ಗಳಲ್ಲಿ ಶೇ 50 ರಷ್ಟು ಪುರುಷರಿಗೆ ಮೀಸಲಾತಿ ಇದೆ.
- ಪುರುಷರು ಮಹಿಳೆಯರ ಸೀಟ್ನಲ್ಲಿ ಕೂತರೇ 200 ರೂಪಾಯಿ ದಂಡ ಹಾಕಲಾಗುತ್ತಿತ್ತು, ಹಾಗಂತ ಪುರುಷರ ಸೀಟ್ನಲ್ಲಿ ಮಹಿಳೆಯರು ಕೂತರೇ ದಂಡ ಇಲ್ಲ.
- ಪುರುಷರ ಸೀಟು ಭರ್ತಿಯಾಗದೇ ಇದ್ದಾಗ ಮಹಿಳೆಯರು ಪುರುಷರ ಸೀಟ್ನಲ್ಲಿ ಕೂರಬಹುದು.
- ಉಚಿತ ಪ್ರಯಾಣ ಮಹಿಳೆ ಪ್ರಯಾಣಿಕರ ಜೊತೆ ನಿಲುಗಡೆ ವಿಚಾರದಲ್ಲಿ ಕಿರಿಕಿರಿ ಮಾಡದಂತೆ ಸೂಚನೆ ನೀಡಲಾಗಿದೆ.
ಸಿಬ್ಬಂದಿಗೆ ಖಡಕ್ ಸೂಚನೆ
- ಮಹಿಳೆಯರಿಗೆ ಉಚಿತ ಪ್ರಯಾಣ ಅಂತ ನಿಲುಗಡೆಯ ಜಾಗದಲ್ಲಿ ಬಸ್ ನಿಲ್ಲಿಸದೇ ಅನಗತ್ಯ ಕಿರಿಕಿರಿ ಮಾಡುವಂತಿಲ್ಲ.
- ನಿಲುಗಡೆ ಇರುವ ಜಾಗದಲ್ಲಿ ಕಡ್ಡಾಯವಾಗಿ ಬಸ್ಗಳನ್ನು ನಿಲ್ಲಿಸಬೇಕು.
- ಮನಸ್ಸಿಗೆ ಬಂದ ಹಾಗೆ ವರ್ತಿಸುವಂತಿಲ್ಲ
- ವರ್ತಿಸಿದರೇ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
- ಕಂಡಕ್ಟರ್ಗಳು ಪ್ರತಿ ಮಹಿಳೆಗೂ ‘O’ ದರದ ಉಚಿತ ಟಿಕೆಟ್ ನೀಡಲೇಬೇಕು
- ಒಂದು ವೇಳೆ ಉಚಿತ ಟಿಕೆಟ್ ನೀಡಿಲ್ಲ ಎಂದರೇ ಕಂಡಕ್ಟರ್ ವಿರುದ್ಧ ಇಲಾಖೆಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.