ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ತಾನು ಚುನಾವಣೆ ವೇಳೆ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಒಂದೋದಾಗಿ ಜಾರಿಗೆ ತರುತ್ತಿದೆ. ಐದು ಗ್ಯಾರಂಟಿಗಳ ಪೈಕಿ ಜನರನ್ನು ಮೊದಲು ತಲುಪುತ್ತಿರುವುದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ. ಇದೇ ಜೂನ್ 11ರಿಂದ ಯೋಜನೆ ಜಾರಿಯಾಗುತ್ತಿದ್ದು, ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ್ ಬಸ್ ಪ್ರಯಾಣದ ಅವಕಾಶವನ್ನು ನೀಡಲಾಗಿದೆ.
ಆದರೆ, ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೂ ಒಂದಿಷ್ಟು ಷರತ್ತುಗಳನ್ನು ರಾಜ್ಯ ಸರ್ಕಾರ ವಿಧಿಸಿದೆ. ಯೋಜನೆ ಯಾವಾಗಿನಿಂದ ಜಾರಿ? ಯೋಜನೆಯ ಫಲಾನುಭವಿಗಳಾಗುವುದು ಹೇಗೆ? ಅರ್ಜಿ ಸಲ್ಲಿಕೆ ಎಲ್ಲಿ? ಎಲ್ಲ ಬಸ್ಗಳಲ್ಲಿಯೂ ಉಚಿತವಾಗಿ ಪ್ರಯಾಣಿಸಬಹುದಾ? ಸೇರಿ ಅನೇಕ ಗೊಂದಲಗಳು ಮಹಿಳೆಯರಲ್ಲಿ ಸೃಷ್ಟಿಯಾಗಿವೆ. ಆ ಎಲ್ಲ ಗೊಂದಲಗಳಿಗೆ, ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇವೆ.
- ಏನಿದು ಶಕ್ತಿ ಯೋಜನೆ?
ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಈ ಯೋಜನೆ ಮೂಲಕ ಕರ್ನಾಟಕದ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣದ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಅದರನ್ವಯ ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದ್ದು, ಆ ಯೋಜನೆಗೆ ಶಕ್ತಿ ಎಂದು ಹೆಸರಿಡಲಾಗಿದೆ. - ಉಚಿತ ಬಸ್ ಪ್ರಯಾಣ ಯಾವಾಗಿನಿಂದ ಜಾರಿ?
ರಾಜ್ಯ ಸರ್ಕಾರ ತಿಳಿಸಿರುವ ಮಾಹಿತಿಯಂತೆ ಜೂನ್ 11ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಲಿದೆ. ಅಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಯೋಜನೆಗೆ ಚಾಲನೆ ನೀಡಲಿದ್ದರೆ, ಜಿಲ್ಲೆಗಳಲ್ಲಿ ಸಚಿವರು ಯೋಜನೆಗೆ ಹಸಿರು ನಿಶಾನೆ ತೋರಲಿದ್ದಾರೆ. ಭಾನುವಾರ ಮಧ್ಯಾಹ್ನ 1 ಗಂಟೆ ಬಳಿಕ ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಪ್ರಯಾಣಿಸಬಹುದು. - ಯಾರಿಗೆ ಉಚಿತ ಬಸ್ ಪ್ರಯಾಣ?
ಕರ್ನಾಟಕ ರಾಜ್ಯದ ಮಹಿಳೆಯರು ಸೇರಿ 6 ರಿಂದ 12 ವರ್ಷದೊಳಗಿನ ಬಾಲಕಿಯರು, ಲೈಂಗಿಕ ಅಲ್ಪಸಂಖ್ಯಾತರು ಶಕ್ತಿ ಯೋಜನೆಯಡಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. - ಎಲ್ಲ ಬಸ್ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದಾ?
ಇಲ್ಲ, ಎಲ್ಲ ಬಸ್ಗಳಲ್ಲೂ ಉಚಿತವಾಗಿ ಪ್ರಯಾಣಿಸುವಂತಿಲ್ಲ. ಕೇವಲ ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿಯ ಬಸ್ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಖಾಸಗಿ ಬಸ್ಗಳಲ್ಲಿ, ಹೊರ ರಾಜ್ಯದ ಬಸ್ಗಳಲ್ಲಿ ದುಡ್ಡು ಪಾವತಿಸಿಯೇ ಮಹಿಳೆಯರು ಪ್ರಯಾಣಿಸಬೇಕು. - ಎಸಿ, ಸ್ಲೀಪರ್ ಬಸ್ಗಳಲ್ಲಿ ಫ್ರೀ ಹೋಗಬಹುದಾ?
ಇಲ್ಲ, ಐಷಾರಾಮಿ ಬಸ್ಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್, ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲಸ್ಗಳನ್ನು ಹೊರತುಪಡಿಸಿ ಉಳಿದ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಅದಲ್ಲದೇ ಕೆಲವು ಆಯ್ದ ಅಂತರ್ರಾಜ್ಯ ಬಸ್ಗಳಲ್ಲಿಯೂ ಉಚಿತ ಬಸ್ ಪ್ರಯಾಣ ಇರುವುದಿಲ್ಲ. - ಉಚಿತ ಬಸ್ ಪ್ರಯಾಣಕ್ಕೆ ದೂರದ ಮಿತಿ ಏನಾದ್ರೂ ಇದೆಯಾ?
ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಯಾವುದೇ ದೂರದ ಮಿತಿಯಿಲ್ಲ. ಕರ್ನಾಟಕದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು. - ಪ್ರಯಾಣಿಸುವಾಗ ಅಗತ್ಯ ದಾಖಲೆ ಇರಬೇಕಾ?
ಹೌದು, ಉಚಿತವಾಗಿ ಪ್ರಯಾಣಿಸಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ವಾಸಸ್ಥಳ ನಮೂದಿಸಿರುವ ಗುರುತಿನ ಚೀಟಿ, ಅಂಗವಿಕಲ, ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಅಥವಾ ಇವುಗಳಲ್ಲಿ ಯಾವುದಾದರೊಂದು ಗುರುತಿನ ಪತ್ರ ಭೌತಿಕವಾಗಿ ಅಥವಾ ಡಿಜಿಲಾಕರ್ನಲ್ಲಿ ಇರಬೇಕು. ಈ ಗುರುತಿನ ಚೀಟಿಗಳಲ್ಲಿ ಫೋಟೋ ಮತ್ತು ವಾಸಸ್ಥಳ ನಮೂದಾಗಿರಬೇಕು.( ಸ್ಮಾರ್ಟ್ ಕಾರ್ಡ್ ಬರುವವರೆಗೂ ಮಾತ್ರ) - ಯೋಜನೆ ಲಾಭ ಪಡೆಯಲು ಅರ್ಜಿ ಸಲ್ಲಿಸಬೇಕಾ?
ಹೌದು, ಸರ್ಕಾರದ ಸೇವಾಸಿಂಧು ಪೋರ್ಟಲ್ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಉಚಿತ ಬಸ್ ಪ್ರಯಾಣಕ್ಕೆ ನೋಂದಾಯಿಸಿಕೊಳ್ಳಬೇಕು. ಅದಾದ ಬಳಿಕ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ಗಳನ್ನು ಸರ್ಕಾರ ವಿತರಿಸಲಿದೆ. - ಅರ್ಜಿ ಸಲ್ಲಿಕೆಗೆ ಅಥವಾ ಸ್ಮಾರ್ಟ್ಕಾರ್ಡ್ ಪಡೆಯಲು ಹಣ ನೀಡಬೇಕಾ?
ಇಲ್ಲ, ಅರ್ಜಿ ಸಲ್ಲಿಕೆಗೆ ಯಾವುದೇ ಹಣವನ್ನು ಮಹಿಳೆಯರು ನೀಡಬೇಕಿಲ್ಲ. ನೀವೇ ಸೇವಾಸಿಂಧು ಪೋರ್ಟಲ್ನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಇನ್ನು, ಸ್ಮಾರ್ಟ್ಕಾರ್ಡ್ ಪಡೆಯಲು ಸದ್ಯದ ಮಾಹಿತಿ ಪ್ರಕಾರ ಸರ್ಕಾರ ಯಾವುದೇ ಶುಲ್ಕವನ್ನು ವಿಧಿಸಿಲ್ಲ. - ಸ್ಮಾರ್ಟ್ಕಾರ್ಡ್ ಬರೋವರೆಗೂ ಉಚಿತ ಪ್ರಯಾಣ ಇಲ್ವಾ?
ಇಲ್ಲ, ಸ್ಮಾರ್ಟ್ಕಾರ್ಡ್ ವಿತರಣೆ ತಡವಾಗುತ್ತದೆ. ಈ ಹಿನ್ನೆಲೆ ಮಹಿಳೆಯರಿಗೆ ಶೂನ್ಯ ದರದ ಟಿಕೆಟ್ ನೀಡಲು ಸೂಚಿಸಲಾಗಿದೆ. ಆದ್ದರಿಂದ ಸ್ಮಾರ್ಟ್ಕಾರ್ಡ್ ಮಹಿಳೆಯರ ಕೈ ಸೇರೋವರೆಗೂ ಕೂಡ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಬಹುದು. - ಲಗೇಜ್ಗೆ ಏನಾದ್ರೂ ಶುಲ್ಕ ಇದ್ಯಾ?
ಸಾಮಾನ್ಯವಾಗಿ ಬಸ್ಗಳಲ್ಲಿ ಪ್ರಯಾಣಿಸುವಾಗ ಎಲ್ಲರಿಗೂ ಉಚಿತ ಲಗೇಜ್ ಮಿತಿ ಇದೆ. ಅದನ್ನು ಹೊರತುಪಡಿಸಿ ಹೆಚ್ಚು ಲಗೇಜ್ ಇದ್ದರೆ ಅದರ ಶುಲ್ಕವನ್ನು ನೀವು ಪಾವತಿಸಬೇಕು.