ಬೆಂಗಳೂರು ;– ಶಕ್ತಿ ಯೋಜನೆ ಜಾರಿಗೊಂಡ ನಂತರ ಮೊದಲ ಭಾನುವಾರವಾದ ಇಂದು ಮಹಿಳೆಯರು ದೇವಾಲಯಗಳಿಗೆ ಲಗ್ಗೆ ಇಡುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಸಿಗಂಧೂರು, ಶೃಂಗೇರಿ, ನಂದಿಬೆಟ್ಟ ಸೇರಿದಂತೆ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿತಾಣಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಜೊತೆಗೆ ಇಂದು ಭಾನುವಾರ ರಜಾ ದಿನವಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಮಕ್ಕಳನ್ನು ಸಹ ಕರೆದೊಯ್ಯುತ್ತಿದ್ದಾರೆ.
ಸಾರಿಗೆ ಸಂಸ್ಥೆಯ 3 ನಿಗಮಗಳಿಂದ ಎಲ್ಲಾ ಘಟಕಗಳಿಂದಲೂ ಧಾರ್ಮಿಕ ಸ್ಥಳಗಳಿಗೆ ಬಸ್ಗಳ ಲಭ್ಯವಿದ್ದು ಎಲ್ಲಾ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು.ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸಟಲೈಟ್ ಬಸ್ ನಿಲ್ದಾಣದಲ್ಲಿ ಹೆಚ್ಚಾಗಿ ಮಹಿಳಾ ಪ್ರಯಾಣಿಕರು ಕಂಡುಬಂದಿದ್ದು, ಮೈಸೂರು ಹಾಗು ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೆರಳಿದ್ದಾರೆ.
ಆಷಾಡ ಅಮವಾಸ್ಯೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯ, ಮೈಸೂರಿನ ಚಾಮುಂಡೇಶ್ವರಿ ದೇವಾಲಯಗಳಿಗೆ ಮಹಿಳಾ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಇಂದಿನಿಂದ ಆಷಾಡ ಪ್ರಾರಂಭವಾಗುತ್ತಿದ್ದು, ದೇವಿಯ ದರ್ಶನ ಪಡೆದರೆ ಒಳಿತಾಗುತ್ತದೆ ಎಂದು ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಸರದಿ ಸಾಲಿನಲ್ಲಿ ನಿಂತಿದ್ದರು.
ಬಸ್ಗಳಿಗಾಗಿ ಮಹಿಳೆಯರು ಚಾತಕ ಪಕ್ಷಿಯಂತೆ ಕಾಯುತ್ತಾ ಬಸ್ ಬರುತ್ತಿದ್ದಂತೆ ಜೇನು ನೊಣದಂತೆ ನಾ ಮುಂದು, ತಾ ಮುಂದು ಎಂದು ಬಸ್ಗಳನ್ನು ಹತ್ತಿ ಸೀಟುಗಳನ್ನು ಹಿಡಿಯುತ್ತಿದ್ದ ದೃಶ್ಯಗಳು ಕಂಡುಬಂದವು.