ಗದಗ: ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ಹಿನ್ನೆಲೆಯಲ್ಲಿ ಒರಿಜಿನಲ್ ಆಧಾರ್ ಕಾರ್ಡ್ ವಿಷಯಕ್ಕೆ ಕಿರಿಕ್ ನಡೆದಿರುವ ಘಟನೆ ಗದಗಿನ ಹೊಸ ಬಸ್ ನಿಲ್ದಾಣದಲ್ಲಿನಡೆದಿದೆ. ಕೊಪ್ಪಳದಿಂದ ಹುಬ್ಬಳ್ಳಿಗೆ ಮಹಿಳೆಯೊಬ್ಬರು ಪ್ರಯಾಣ ಬೆಳೆಸಿದ್ದರು. ಈ ಮಧ್ಯೆ ಗದಗಿನಲ್ಲಿ ಇನ್ನೊಂದು ಬಸ್ ಹತ್ತಿರುವ ಮಹಿಳೆಯು ಅಲ್ಲಿ ಕಂಡಕ್ಟರ್ ಜತೆಗೆ ವಾಗ್ವಾದ ನಡೆಸಿದ್ದಾರೆ. ಇಷ್ಟಕ್ಕೂ ಇಬ್ಬರ ಮಧ್ಯೆ ಜಗಳಕ್ಕೆ ಕಾರಣವಾಗಿದ್ದು, ದಾಖಲೆಯ ವಿಚಾರ. ಆಕೆ ತನ್ನ ಗುರುತಿನ ಮುದ್ರಿತ ದಾಖಲೆಯನ್ನು ಇಟ್ಟುಕೊಂಡಿಲ್ಲ.
ಮೊಬೈಲ್ನಲ್ಲಿನ ಆಧಾರ್ ಕಾರ್ಡ್ ತೋರಿಸಿದ್ದಾರೆ.ಆದರೆ, ಈ ಮೊದಲೇ ಸರ್ಕಾರದಿಂದ ಸೂಚನೆ ಇರುವ ಹಿನ್ನೆಲೆಯಲ್ಲಿ ನಿರ್ವಾಹಕ ಮೊಬೈಲ್ ಮೂಲಕ ಫೋಟೊ ದಾಖಲೆ ಇಟ್ಟುಕೊಂಡು ಉಚಿತ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಣೆ ಮಾಡಿದ್ದಾರೆ. ಡಿಜಿಲಾಕರ್ನಲ್ಲಿದ್ದರೆ ಸರಿ ಎಂದು ಹೇಳಿದ್ದಾರೆ. ಆದರೆ, ಮಹಿಳೆಗೆ ಡಿಜಿ ಲಾಕರ್ ಬಗ್ಗೆ ಮಾಹಿತಿ ಇಲ್ಲ. ಅವರ ಬಳಿ ಮೊಬೈಲ್ನಲ್ಲಿ ದಾಖಲೆಯ ಫೋಟೊ ಮಾತ್ರ ಇತ್ತು.
ನಿರ್ವಾಹಕ ಉಚಿತ ಪ್ರಯಾಣಕ್ಕೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆ, ನಿರ್ವಾಹಕನ ಮುಖಕ್ಕೆ ಮೊಬೈಲ್ ಹಿಡಿದು, ತಾನು ತೋರಿಸುತ್ತಿರುವುದೂ ದಾಖಲೆಯೇ ಆಗಿದೆ. ಇದು ನನ್ನ ಆಧಾರ್ ಕಾರ್ಡ್ನ ಸಾಫ್ಟ್ ಕಾಪಿಯಾಗಿದೆ. ನೋಡಿ, ಇದು ದಾಖಲೆ ಹೌದೋ ಅಲ್ಲವೋ ಎಂದು ತಗಾದೆ ತೆಗೆದಿದ್ದಾಳೆ. ಇದಕ್ಕೆ ನಿರ್ವಾಹಕ ಮಾತ್ರ ಬಿಲ್ಕುಲ್ ಒಪ್ಪಲಿಲ್ಲ. “ಇಲ್ಲ ಇಲ್ಲ, ನಮಗೆ ಇರುವ ಸೂಚನೆಯಂತೆ ನಾನು ನಡೆದುಕೊಳ್ಳಲೇಬೇಕು.
ನೀವು ಮುದ್ರಿತ ದಾಖಲೆಯನ್ನು ತೋರಿಸಿ ಬಸ್ ಹತ್ತಿ” ಎಂದು ನೇರವಾಗಿ ಹೇಳಿದ್ದಾರೆ. ಆದರೆ, ಪಟ್ಟುಬಿಡದ ಮಹಿಳೆ ಜಗಳ ಮಾಡುತ್ತಲೇ ಈ ವಿಚಾರವನ್ನು ನಿಲ್ದಾಣದ ಸಂಚಾರ ನಿಯಂತ್ರಣ ಕೊಠಡಿವರೆಗೂ ಎಳೆದುಕೊಂಡು ಹೋಗಿದ್ದಾಳೆ. ಅಲ್ಲಿಯೂ ಸಹ ತನ್ನ ವಾದವನ್ನು ಮುಂದುವರಿಸಿದ್ದು, ಮೊಬೈಲ್ ತೋರಿಸಿ ಇದರಲ್ಲಿರುವ ನಂಬರ್ ಚೆಕ್ ಮಾಡಿಕೊಳ್ಳಿ ಎಂದು ವಾದವನ್ನು ಮುಂದಿಟ್ಟಿದ್ದಾಳೆ. ನಿಲ್ದಾಣದ ಅಧಿಕಾರಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ಜತೆ ವಾದ ಮಾಡಿದ್ದಾಳೆ. ಕೊನೆಗೆ ಆಕೆಯನ್ನು ಸಮಾಧಾನ ಪಡಿಸಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.