ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಇಂದು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 10 ಕೆ.ಜಿ. ಅಕ್ಕಿ ಉಚಿತ ವಿತರಣೆ ಮಾಡುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರ ಸಭೆಯನ್ನು ನಾಳೆ ವಿಧಾನಸೌಧದಲ್ಲಿ ಕರೆದಿದ್ದಾರೆ. ಸಚಿವರ ಸಭೆಗೆ ಹಾಜರಾಗುವ ಮುನ್ನ ಪೂರ್ವಸಿದ್ಧತೆ ಎಂಬಂತೆ ಸಚಿವ ಮುನಿಯಪ್ಪ ಅವರು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಪಡಿತರ ವ್ಯವಸ್ಥೆ, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ.ಅಕ್ಕಿ ನೀಡುವುದರಿಂದ ಸರ್ಕಾರಕ್ಕೆ ಆಗುವ ಹೆಚ್ಚುವರಿ ಹೊರೆ, ಈಗಿರುವ ಪಡಿತರ ಚೀಟಿಗಳ ಸಂಖ್ಯೆ ಬಗ್ಗೆ ಮಾಹಿತಿ ಪಡೆದು ಅಕಾರಿಗಳಿಗೆ ಸಲಹೆ- ಸೂಚನೆಯನ್ನು ಸಚಿವರು ನೀಡಿದರು. ಸಭೆಯಲ್ಲಿದ್ದ ಅಧಿಕಾರಿಗಳು ಸಚಿವರಿಗೆ ಅಂಕಿ ಅಂಶಗಳ ಮಾಹಿತಿ ಒದಗಿಸಿದ್ದಾರೆ.
ಬಿಪಿಎಲ್ ಕಾರ್ಡ್ ಗಳಲ್ಲಿ ಇರುವ ಫಲಾನುಭವಿಗಳೆಷ್ಟು? ರಾಜ್ಯದಲ್ಲಿರುವ ಅಂತ್ಯೋದಯ ಕಾರ್ಡ್ ಗಳೆಷ್ಟು? ಹೊಸ ಕಾರ್ಡ್ ಗಳನ್ನು ನೀಡುವ ವಿಚಾರದಲ್ಲಿ ಸರ್ಕಾರ ಯಾವ ನಿಲುವು ತಳೆಯಬೇಕು ಎಂಬೆಲ್ಲೆ ವಿಚಾರಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು