ಗುವಾಹಟಿ: ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟರ್ ನೀಡುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ (Assam CM Himath Biswa) ಘೋಷಿಸಿದ್ದಾರೆ. ಜುಲೈ 5 ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ದ್ವಿತೀಯ ಪಿಯುಸಿ (2nd PUC) ಪರೀಕ್ಷೆಗಳಲ್ಲಿ 60% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಹುಡುಗಿಯರು ಮತ್ತು 75% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಹುಡುಗರು ಈ ಉಚಿತ ಸ್ಕೂಟರ್ (Free Scooter) ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದಿದ್ದಾರೆ.
ಈ ಸಂಬಂಧ ಅಸ್ಸಾಂ ಪ್ರವಾಸೋದ್ಯಮ ಸಚಿವ ಜಯಂತ್ ಮಲ್ಲಾ ಬರೂಹ್ ಪ್ರತಿಕ್ರಿಯಿಸಿ, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಉತ್ತೇಜಿಸಲು ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಉತ್ತಮ ಪ್ರವೇಶ ಒದಗಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ. ಸರ್ಕಾರಿ ಮತ್ತು ಪ್ರಾಂತೀಯ ಶಾಲೆಗಳಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ 3.78 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗೆ 167 ಕೋಟಿ ರೂ. ಮೀಸಲಿಡಲಾಗಿದೆ.
ಇದಲ್ಲದೇ ಸೆಪ್ಟೆಂಬರ್ನಿಂದ ತಿಂಗಳಿಗೆ 1,250 ರೂ.ನಂತೆ 7 ಲಕ್ಷ ಜನರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಅಸ್ಸಾಂನಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲು ಕ್ರಮಕೈಗೊಳ್ಳುವಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ಮನವಿ ಮಾಡಲಾಗಿದೆ. ಅಸ್ಸಾಂ ರಾಜ್ಯದ ಕೃಷಿ ವಿಶ್ವವಿದ್ಯಾಲಯದಲ್ಲಿ 27% ಸೀಟುಗಳನ್ನು ಒಬಿಸಿಗೆ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸಿಎಂ ಹೇಳಿದ್ದಾರೆ.