ಬೆಂಗಳೂರು (ಫೆ.12): ಸ್ತ್ರೀರೋಗ ಸಮಸ್ಯೆಗಳಿಂದ ಬಳಲುತ್ತಿರುವ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗೆ ಉಚಿತವಾಗಿ ಸ್ತ್ರೀರೋಗ ಮತ್ತು ಇತರ ಸಾಮಾನ್ಯ ಶಸ್ತ್ರಚಿಕಿತ್ಸೆ ನೀಡಲು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಕಿಂಡರ್ ಆಸ್ಪತ್ರೆಯು ಮುಂದಾಗಿದೆ. ಕಿಂಡರ್ ವುಮೆನ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಸಿಎಸ್ಆರ್ ಉಪಕ್ರಮದಡಿಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಯೋಜನೆ ಇದಾಗಿದ್ದು, ‘ಕಿಂಡ್ ಮಾ ಜೀವನ’ ಹೆಸರಿನಡಿ ಮಹದೇವಪುರ ಕ್ಷೇತ್ರದಲ್ಲಿ ಮಹಿಳೆಯರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ಮೂಲಕ ಆರ್ಥಿಕ ದುರ್ಬಲ ವರ್ಗದ ಮಹಿಳೆಯ ಆರೋಗ್ಯ ಅಗತ್ಯತೆಗಳನ್ನು ಪೂರೈಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.
ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಲು ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ ‘ಕಿಂಡರ್ ಮಾ ಜೀವನ’ ಮೂಲಕ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಕಿಂಡರ್ ವುಮೆನ್ಸ್ ವೆಲ್ಫೇರ್ ಟ್ರಸ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಈ ಯೋಜನೆಯ ಮೂಲಕ ಪ್ರತಿ ಮಹಿಳೆಯು ತನ್ನ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗುತ್ತದೆ.
ಕಿಂಡರ್ ಮಾ ಜೀವನ ಉದ್ಘಾಟನಾ ಕಾರ್ಯಕ್ರಮವು ಫೆ.13 ರಂದು ವೈಟ್ ಫೀಲ್ಡ್ ಮುಖ್ಯರಸ್ತೆಯ ಎಸ್ ಕೆಜಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ ಅರವಿಂದ ಲಿಂಬಾವಳಿ, ಮಹದೇವಪುರದ ಶಾಸಕಿ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಮತ್ತು ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಸೇರಿದಂತೆ ಗೌರವಾನ್ವಿತ ಅತಿಥಿಗಳು ಆಗಮಿಸಲಿದ್ದಾರೆ.
ಈ ಕುರಿತಾಗಿ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಂಡೋರಮಾ ಹೆಲ್ತ್ ಕೇರ್ ಲಿಮಿಟೆಡ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷರಾದ ಡಾ. ವಿ.ಕೆ.ಪ್ರದೀಪ್ ಕುಮಾರ್ ಮಾತನಾಡಿ, “ಕಿಂಡರ್ ಮಾ ಜೀವನವು ಆರೋಗ್ಯಕರ ಸಮಾಜವನ್ನು ನಿರ್ಮಾಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಲು ಮುಂದಾಗಿದೆ. ಉಚಿತ ಸ್ತ್ರೀರೋಗ ಶಸ್ತ್ರಚಿಕಿತ್ಸಾ ಸೇವೆಯನ್ನು ನೀಡುವ ಮೂಲಕ ನಾವು ಸಶಕ್ತ ಮಹಿಳಾ ಸಮಾಜ ನಿರ್ಮಿಸುವ ಆಶಯ ಹೊಂದಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಈ ಯೋಜನೆಯನ್ನು ಹಾಕಿಕೊಂಡಿದ್ದೇವೆ” ಎಂದು ತಿಳಿಸಿದರು.
ಕಿಂಡೋರಮಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಗ್ರೂಪ್ ಸಿಇಒ ರೆಂಜಿತ್ ಕೃಷ್ಣನ್ ಮಾತನಾಡಿ, ‘ಕಿಂಡರ್ ಮಾ ಜೀವನವು ಸಮುದಾಯಕ್ಕೆ ಸೇವೆ ಸಲ್ಲಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆಯ ಮೂಲಕ ನಾವು ಮಹಿಳೆಯರ ಜೀವನದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.