ವಾಷಿಂಗ್ಟನ್: ”ಹಿಂಸಾಚಾರ, ದೇಶದ್ರೋಹಿ ಕೃತ್ಯಗಳನ್ನು ಬಹಿರಂಗವಾಗಿ ಪ್ರತಿಪಾದಿಸುವ ಉಗ್ರರನ್ನು ಬೆಂಬಲಿಸುವ ಮನೋಭಾವ ಬೆಳೆಸಿಕೊಂಡಿರುವ ಕೆನಡಾ, ಉಗ್ರಗಾಮಿಗಳ ಆಶ್ರಯ ತಾಣವಾಗಿದೆ,” ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗಂಭೀರ ಆರೋಪ ಮಾಡಿದ್ದಾರೆ.
ಸಿಖ್ ಮೂಲಭೂತವಾದಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತದ ಸಂಪರ್ಕ ಕಲ್ಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊಗೆ ತಿರುಗೇಟು ನೀಡಿರುವ ಜೈಶಂಕರ್, ”ರಾಜಕೀಯ ಹಿತಾಸಕ್ತಿ ಕಾಯ್ದುಕೊಳ್ಳಲು ಉಗ್ರರನ್ನು ಪ್ರತ್ಯಕ್ಷವಾಗಿ ಬೆಂಬಲಿಸುವ ನೀತಿಯನ್ನು ಅನುಸರಿಸುತ್ತಿದೆ. ಸಂಘಟಿತ ಅಪರಾಧಕ್ಕೆ ಪ್ರೋತ್ಸಾಹ ನೀಡುವ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ” ಎಂದು ಆರೋಪಿಸಿದರು.
“ನೋಡಿ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಅಭಿವ್ಯಕ್ತಿ ಸ್ವಾತಂತ್ರ್ಯ ಏನು ಎಂಬುದು ಬೇರೆಯವರಿಂದ ನಾವು ಕಲಿಯುವ ಅಗತ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವು ಹಿಂಸಾಚಾರದ ಕುಮ್ಮಕ್ಕು ನೀಡುವ ಮಟ್ಟಿಗೆ ಇರುತ್ತದೆ ಎಂದು ನಾವು ಭಾವಿಸುವುದಿಲ್ಲ. ನಮ್ಮ ಪ್ರಕಾರ ಅದು ಸ್ವಾತಂತ್ರ್ಯದ ದುರ್ಬಳಕೆ, ಸ್ವಾತಂತ್ರ್ಯದ ರಕ್ಷಣೆ ಅಲ್ಲ” ಎಂದು ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.