ಜನಪ್ರಿಯ ಮೆಸೇಜಿಂಗ್ ಆಪ್ ಟೆಲಿಗ್ರಾಮ್ನ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್ ಪೊಲೀಸರು ಬಂಧಿಸಿದ್ದಾರೆ. ಪ್ಯಾರಿಸ್ನ ಉತ್ತರಕ್ಕಿರುವ ಲೆ ಬೌರ್ಗೆಟ್ ವಿಮಾನ ನಿಲ್ದಾಣಕ್ಕೆ ತಮ್ಮ ಖಾಸಗಿ ವಿಮಾನದ ಮೂಲಕ ಬಂದಿಳಿದ 39 ವರ್ಷದ ಡುರೊವ್ ಅವರನ್ನು ಬಂಧಿಸಲಾಗಿದೆ ಎಂದು ಫ್ರೆಂಚ್ ಮಾಧ್ಯಮಗಳು ವರದಿ ಮಾಡಿದೆ.
ಟೆಲಿಗ್ರಾಮ್ ಪ್ಲಾಟ್ಫಾರ್ಮ್ಗೆ ಸಂಬಂಧಿಸಿದ ಅಪರಾಧಗಳ ಕುರಿತು ಅವರ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಈ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಪರಾಧದ ನಿರ್ದಿಷ್ಟ ಸ್ವರೂಪವನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಪ್ಯಾರಿಸ್ನ ಹೊರವಲಯದಲ್ಲಿರುವ ಬೋರ್ಗೆಟ್ ವಿಮಾನ ನಿಲ್ದಾಣಕ್ಕೆ ಖಾಸಗಿ ಜೆಟ್ನಲ್ಲಿ ಬಂದಿಳಿದ ಪಾವೆಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಗಾಗಿ ಫ್ರಾನ್ಸ್ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ. ರಷ್ಯಾ, ಉಕ್ರೇನ್, ಸೋವಿಯತ್ ಯುನಿಯನ್ ದೇಶಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಟೆಲಿಗ್ರಾಂ ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ
ಪಾವೆಲ್ ಬಂಧನದ ಕುರಿತು ಇದುವರೆಗೆ ಟೆಲಿಗ್ರಾಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ ಫ್ರೆಂಚ್ ಆಂತರಿಕ ಸಚಿವಾಲಯ ಮತ್ತು ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ರಾಯಿಟರ್ಸ್ ವರದಿ ತಿಳಿಸಿದೆ.