ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಜು.10ರಿಂದ ಆಗಸ್ಟ್ 9ರವರೆಗೆ ಅಂದರೆ ಬರೋಬ್ಬರಿ ಒಂದು ತಿಂಗಳು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಜು.10ರಿಂದ ಆ.9ರವರೆಗೆ ಪ್ರತಿದಿನ 2 ತಾಸು ಮೆಟ್ರೋ ಸಂಚಾರ ಬಂದ್ ಮಾಡಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪತ್ರಿಕೆ ಪ್ರಕಟಣೆ ಹೊರಡಿಸಿದೆ.
ನೇರಳೆ ಮಾರ್ಗದಲ್ಲಿನ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕವನ್ನು ಕಲ್ಪಿಸಲು ಸಿಗ್ನಲಿಂಗ್ ಹಾಗೂ ಇತರ ಸಂಬಂಧಿತ ಕಾಮಗಾರಿ ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 10 ರಿಂದ ಆಗಸ್ಟ್ 09 ರವರೆಗೆ ಬೈಯಪ್ಪನಹಳ್ಳಿ- ಎಸ್.ವಿ. ರಸ್ತೆ ಹಾಗೂ ಕೃಷ್ಣರಾಜಪುರ- ವೈಟ್ಫೀಲ್ಡ್ (ಕಾಡುಗೋಡಿ) ಮಾರ್ಗಗಳ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತ ಮಾಡಲಾಗುತ್ತಿದೆ.
ಬೆಳಗ್ಗೆ 2 ಗಂಟೆ ಮಾತ್ರ ಸ್ಥಗಿತ: ಬೆಳಗ್ಗೆ 5.00 ಗಂಟೆಯಿಂದ 7.00 ಗಂಟೆವರೆಗೆ ಬೈಯಪ್ಪನಹಳ್ಳಿ ಮತ್ತು ಎಸ್.ವಿ ರಸ್ತೆ ಗೂ ಕೃಷ್ಣರಾಜಪುರ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆಯ ಮೆಟ್ರೋ ರೈಲು ಸೇವೆ ಸ್ಥಗಿತಗೊಳಿಸಲಾಗುತ್ತದೆ. ಬೆಳಗ್ಗೆ 7.00 ಗಂಟೆಯ ನಂತರ ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಹಾಗೂ ಕೃಷ್ಣರಾಜಪುರ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ವಾಣಿಜ್ಯ ರೈಲು ಸೇವೆಗಳು ಎಂದಿನಂತೆ ರಾತ್ರಿ 11.00 ಗಂಟೆಯವರೆಗೆ ಲಭ್ಯವಿರುತ್ತವೆ.