ಬೆಂಗಳೂರು: ರಾಜ್ಯದ ಖಾಸಗಿ ಆಡಳಿತದ ದೇವಾಲಯಗಳಲ್ಲಿ ಇನ್ಮುಂದೆ ಡ್ರೆಸ್ ಕೋಡ್ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ 800 ದೇವಾಲಯಗಳ ಪೈಕಿ 500ಕ್ಕೂ ಹೆಚ್ಚು ದೇವಾಲಯಗಳಲ್ಲಿ ಮುಂದಿನ ಒಂದು ತಿಂಗಳು, ದೇಗುಲದ ಆಡಳಿತ ಮಂಡಳಿಯೇ ಈ ಬಗ್ಗೆ ಜಾಗೃತಿ ಮೂಡಿಸಲಿದೆ. ಆದರೆ ಮತ್ತೆ ಹಿಂದಿನ ರೀತಿಯೇ ಸಾರ್ವಜನಿಕರು ನಡೆದುಕೊಂಡರೆ, ಅಂತವರಿಗೆ ದೇವಾಲಯದ ಕೆಲ ಆಚರಣೆಗಳನ್ನ ನೀಡದಿರಲು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಭಾ ಚಿಂತನೆ ನಡೆಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಉಡುಪುಗಳನ್ನ ಧರಿಸಿ ಬರುವುದನ್ನ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ನಿಯಮ ಮೀರಿದ್ರೆ ಮಂಗಳಾರತಿ ಮತ್ತು ಪ್ರಸಾದ ನೀಡದಿರಲು ಪ್ಲ್ಯಾನ್ ಮಾಡಲಾಗ್ತಿದೆ. ಎಲ್ಲಾ ದೇವಾಲಯಗಳಲ್ಲೂ ಬೋರ್ಡ್ಗಳನ್ನ ಹಾಕಿ ಜಾಗೃತಿ ಮೂಡಿಸೋದಲ್ಲದೆ ಮೌಖಿಕವಾಗಿ ತಿಳಿ ಹೇಳುವ ಕೆಲಸಕ್ಕೆ ಮುಂದಾಗ್ತಿದೆ. ಈ ಹಿಂದೆ ವೈಕುಂಠ ಏಕಾದಶಿ ವೇಳೆ ಇದೇ ರೀತಿಯ ನಿಯಮಗಳನ್ನ ಕೆಲ ದೇವಾಲಯಗಳಲ್ಲಿ ಜಾರಿಗೆ ತರಲಾಗಿತ್ತು. ಈಗ ಎಲ್ಲಾ ದೇವಾಲಯದಲ್ಲೂ ಅಭಿಯಾನ ಆರಂಭಿಸಲಾಗಿದೆ.
ಹೊರ ದೇಶ ಅಥವಾ ಹೊರ ಭಾಗಗಳಿಂದ ಬರುವ ಭಕ್ತರನ್ನು ಗಮನದಲ್ಲಿಟ್ಟುಕೊಂಡು ದೇವಾಲಯದ ವತಿಯಿಂದಲೇ ಬಟ್ಟೆಗಳನ್ನು ನೀಡಲಿದ್ದಾರೆ. ಬಾಡಿಗೆ ಬಟ್ಟೆಗಳನ್ನ ಪಡೆದು ದೇವರ ದರ್ಶನ ಪಡೆದು ನಂತರ ಆ ಬಟ್ಟೆಗಳನ್ನ ದೇವಾಲಯದ ಕೌಂಟರ್ನಲ್ಲೇ ವಾಪಸ್ ನೀಡಬೇಕು. ಒಬ್ಬರು ಧರಿಸಿದ ಬಟ್ಟೆಯನ್ನ ಮತ್ತೊಬ್ಬರು ಧರಿಸುವ ಮುನ್ನ, ಶುದ್ದವಾಗಿ ಒಗೆಯಲು ಕೂಡ ದೇವಾಸ್ಥಾನದ ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿವೆ.