ಮಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಕರಾವಳಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇದೇ ಪರಿಸ್ಥಿತಿ ಇನ್ನೆರಡು ದಿನ ಮುಂದುವರೆಯಲಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ 3 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 30 ರಿಂದ ಆಗಸ್ಟ್ 3 ರವರೆಗೆ ಹಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಇಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿತ್ತು. ಈ ಮಧ್ಯೆ ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾದ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಬೀಚ್, ಪ್ರವಾಸಿ ತಾಣಗಳಲ್ಲಿ ಹುಚ್ಚಾಟ ಆಡುವವರಿಗೆ ಜಿಲ್ಲಾಧಿಕಾರಿಯಿಂದ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೀಚ್, ಪ್ರವಾಸಿ ತಾಣಗಳಲ್ಲಿ ರೀಲ್ಸ್ ಮಾಡಿದರೆ ಬೀಳುತ್ತೆ ಕೇಸ್
ದಕ್ಷಿಣಕನ್ನಡ ಜಿಲ್ಲಾಧಿಕಾರಿ ಬೀಚ್, ಪ್ರವಾಸಿ ತಾಣಗಳಲ್ಲಿ, ಹೆಚ್ಚು ನೀರಿರುವ ಸ್ಥಳಗಳಲ್ಲಿ ಹುಚ್ಚಾಟ ಆಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದು, ಇಂತಹ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಿದ್ರೆ ಕೇಸ್ ಬೀಳುತ್ತೆ ಎಂದು ಹೇಳಿದ್ದಾರೆ. ಪ್ರವಾಸಿ ತಾಣ, ಬೀಚ್ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಈಗಾಗಲೇ ಅಪಾಯಕಾರಿ ಬೋರ್ಡ್ ಅಳವಡಿಸಲಾಗಿದೆ. ಅಪಾಯಕಾರಿ ಬೋರ್ಡ್ ಜೊತೆಗೆ ಕೆಲವು ಕಾನೂನುಗಳೂ ಅನ್ವಯಿಸುತ್ತದೆ. ಕಾನೂನು ಮೀರಿ ರೀಲ್ಸ್ ಅಥವಾ ಸಾಹಸ ಮಾಡಲು ಮುಂದಾದ್ರೆ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಕಾಡಿನ ಮಧ್ಯೆ ಹಾಗು ಇತರ ಕಡೆಗಳಲ್ಲಿ ಈ ರೀತಿ ಯಾವತ್ತೂ ಮಾಡಲು ಹೋಗಬೇಡಿ. ಪ್ರಾಕೃತಿಕ ವಿಕೋಪ ಯಾವಾಗ, ಹೇಗೆ ನಡೆಯುತ್ತೆ ಅನ್ನೋದನ್ನು ಹೇಳೋಕಾಗಲ್ಲ ಎಂದು ಮಾಧ್ಯಮಗಳ ಮೂಲಕ ಜನರಿಗೆ ವಿನಂತಿ ಮಾಡಿದ್ದಾರೆ.
ಪ್ರವಾಹಕ್ಕೆ ತುತ್ತಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ
ದಕ್ಷಿಣ ಕನ್ನಡದಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದ ಪ್ರವಾಹ ಉಂಟಾಗಿದ್ದು, ಇದೀಗ ಈ ಸ್ಥಳಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳ ಪರಿಶೀಲನೆ ಮಾಡಿದ್ದಷ್ಟೇ ಅಲ್ಲದೆ ಬೀಚ್, ಪ್ರವಾಸಿ ತಾಣಗಳಲ್ಲಿ ರೀಲ್ಸ್ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.