ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿ, ಬಿಜೆಪಿ ಮುಖಂಡರ ಬಾಯಿಗೆ ಸಿಕ್ಕು, ಕೊನೆಗೆ ಇದಾ ಆದಾ ಎಂಬ ಚಿಂತೆಯಲ್ಲಿ ತಲೆ ಮೇಲೆ ಕೈ ಹಿಡಿದು ಕುಂತಿದ್ದ ಸಿದ್ದರಾಮಯ್ಯ(Siddaramaiah) ಗೆಲುವನ್ನು ತಮ್ಮದಾಗಿಸಿಕೊಂಡು ರಾಜ್ಯದ ಸಿಎಂ ಪಟ್ಟ ಅಲಂಕರಿಸಿದ್ದಾರೆ. ಸದ್ಯ ತಮಗೆ ಈ ಸ್ಥಾನ ಸಿಗುವಂತೆ ಮಾಡಿದ ಮತದಾರ ಪ್ರಭುಗಳಿಗೆ ತಮ್ಮನ್ನು ಭೇಟಿ ಮಾಡಲು ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಇನ್ನು ಮುಂದೆ ವರುಣಾ ಕ್ಷೇತ್ರದ(Varuna Constituency) ಜನ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡುವುದು ತುಂಬಾ ಸುಲಭ.
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲು ಬರುವ ವರುಣಾ ಕ್ಷೇತ್ರದ ಮತದಾರರಿಗೆ ಸಿಎಂ ಸುಲಭ ಭೇಟಿಗೆ ಅವಕಾಶ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬರುವ ವರುಣಾ ಕ್ಷೇತ್ರದ ಮತದಾರರಿಗೆ ತಮ್ಮ ಸರ್ಕಾರಿ ನಿವಾಸಕ್ಕೆ ಬರಲು ಮುಕ್ತ ಅವಕಾಶ ಕಲ್ಪಿಸಿದ್ದಾರೆ. ವರುಣಾದಿಂದ ಬಂದ ಮತದಾರರು ತಮ್ಮ ಅಡ್ರೆಸ್ ತೋರಿಸಿ ಒಳಗೆ ಹೋಗಲು ಅವಕಾಶ ನೀಡಲಾಗಿದೆ. ಆಧಾರ್, ಐಡಿ ಚೆಕ್ ಮಾಡಿ ವರುಣಾ ಕ್ಷೇತ್ರದ ಮತದಾರರು ಇದ್ರೆ ಅವರನ್ನು ಸಿಎಂ ಭೇಟಿಗೆ ಬಿಡಲು ಪೊಲೀಸರಿಗೆ ಸೂಚಿಸಲಾಗಿದೆ. ಸಿದ್ದರಾಮಯ್ಯ ವರುಣಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಸಿಎಂ ಆಗಿದ್ದಾರೆ. ಹೀಗಾಗಿ ಕೊನೆಯ ಅಧಿಕಾರದ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಮತದಾರರಿಗೆ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಅಭಿಮಾನಿಗಳು ಮತ್ತಷ್ಟು ಖುಷಿ ಪಟ್ಟಿ ಸಂಭ್ರಮಿಸಿದ್ದಾರೆ.
ಕುರಿ ಎಣಿಸುವ ಕುರುಬ ಹಣಕಾಸು ಖಾತೆ ಇಟ್ಟುಕೊಂಡು ಏನ್ ಮಾಡ್ತಾನೆ ಎಂದು ಹಂಗಿಸಿದವರ ಮುಂದೆ ದಾಖಲೆಯ 13 ಬಾರಿ ಬಜೆಟ್ ಮಂಡಿಸಿ ತಾನೆಂಥವ ಎಂದು ತೋರಿಸಿದವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಬಹಳ ಕಷ್ಟ ಕಾರ್ಪಣ್ಯದ ಸ್ಥಿತಿಯಲ್ಲಿ ಬೆಳೆದವರಾದ್ದರಿಂದ ಬಡವರ ಬಗ್ಗೆ ಸಹಜವಾಗಿಯೇ ಕಾಳಜಿ ಹೆಚ್ಚು. ಖ್ಯಾತ ಸಮಾಜವಾದಿ ಡಾಕ್ಟರ್ ರಾಮಮನೋಹರ್ ಲೋಹಿಯಾ ಸಿದ್ಧಾಂತದಿಂದ ಪ್ರೇರಿತರಾದ ಸಿದ್ದರಾಮಯ್ಯ ಸಿಎಂ ಆದಾಗ ಬಡವರ ಏಳ್ಗೆಗೆ ಮತ್ತವರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ರೂಪಿಸಲು ಮೀನ ಮೇಷ ಎಣಿಸಲಿಲ್ಲ. ಅನ್ನ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ ಇತ್ಯಾದಿ ಅವರ ಜನಪ್ರಿಯ ಯೋಜನೆಗಳ ಸಾಲಿನಲ್ಲಿ ನಿಲ್ಲುತ್ತವೆ. ಈಗ ಮತ್ತೆ ಎರಡನೇ ಬಾರಿಗೆ ಸಿಎಂ ಆಗಿ ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ತಮಗೆ ಮತ ಹಾಕಿದ ಮತದಾರ ಪ್ರಭುಗಳ ಕಷ್ಟ ಆಲಿಸಲು ತಮ್ಮ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಿ ಜನ ಸ್ನೇಹಿ ಸಿಎಂ ಆಗಿದ್ದಾರೆ.