ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ಮತ್ತೊಂದು ಶಾಕ್ ಎದುರಾಗಿದೆ. ಪ್ರಕರಣದಲ್ಲಿ ಇದುವರೆಗೂ ನಟಿ ಪವಿತ್ರಾ ಗೌಡ ಮೊದಲ ಆರೋಪಿ ಹಾಗೂ ದರ್ಶನ್ ಎರಡನೇ ಆರೋಪಿ ಆಗಿದ್ದರು. ಆದರೆ ಈಗ ಬೆಂಗಳೂರು ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿದ್ದು, ದರ್ಶನ್ ಅವರನ್ನು ಎ1 ಮಾಡುವುದು ಬಹುತೇಕ ಖಚಿತ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ದರ್ಶನ್ ಗೆ ಸಂಕಷ್ಟ ಎದುರಾಗಲಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ ಬೆಳಕಿಗೆ ಬಂದು, ಪೊಲೀಸರು ತನಿಖೆ ಆರಂಭಿಸಿದಾಗ ದರ್ಶನ್ ಅವರನ್ನು ಎ2 ಎಂದು ಪರಿಗಣಿಸಲಾಗಿತ್ತು. ಪವಿತ್ರಾ ಗೌಡ ಅವರ ಕಾರಣದಿಂದಲೇ ಕೊಲೆ ನಡೆದಿರುವ ಶಂಕೆ ಇರುವುದರಿಂದ ಆಕೆ ಎ1 ಆಗಿದ್ದರು. ಆದರೆ ತನಿಖೆ ವೇಳೆ ನಟನ ವಿರುದ್ಧ ಹಲವು ಪ್ರಮುಖ ಸಾಕ್ಷಿಗಳು ಸಿಕ್ಕವು. ದರ್ಶನ್ ಅಣತಿಯಂತೆ ಅಪಹರಣ ನಡೆಸಿ, ನಂತರ ಹಲ್ಲೆ ಮಾಡಿ ಹತ್ಯೆ ನಡೆಸಿದ್ದಕ್ಕೆ ಸಾಕ್ಷಿಗಳು ಸಿಕ್ಕಿವೆ. ಹತ್ಯೆ ಬಳಿಕ ಶವ ವಿಲೇವಾರಿಗೆ ದರ್ಶನ್ ಹಣ ಕೊಟ್ಟಿದ್ದು ಕೂಡ ತಿಳಿದು ಬಂದಿದೆ.
ಈ ಎಲ್ಲ ಪ್ರಮುಖ ಸಾಕ್ಷಿಗಳು ದರ್ಶನ್ ವಿರುದ್ಧವಾಗಿ ಇರುವುದರಿಂದ ಅವರೇ ಈ ಕೇಸ್ನಲ್ಲಿ ಎ1 ಆಗುವ ಸಾಧ್ಯತೆ ದಟ್ಟವಾಗಿದೆ. A2ನಿಂದ A1 ಮಾಡಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಇದು ಖಚಿತವಾದರೆ ರೇಣುಕಾಸ್ವಾಮಿ ಕೊಲೆಗೆ ದರ್ಶನ್ ಅವರೇ ಸೂತ್ರಧಾರ ಎಂಬುದು ಖಚಿತವಾಗಲಿದೆ. ಇದರಿಂದ ದರ್ಶನ್ ಗೆ ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ.
ಹೈಪ್ರೊಫೈಲ್ ಕೇಸ್ ಆದ್ದರಿಂದ ಸಾಕಷ್ಟು ಗಂಭೀರವಾಗಿ ತನಿಖೆ ನಡೆದಿದೆ. ಹಲವು ಬಗೆಯ ಸಾಕ್ಷಿಗಳನ್ನು ಕಲೆ ಹಾಕಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಲಾಗಿದೆ. ಇದರಲ್ಲಿ ರೇಣುಕಾ ಸ್ವಾಮಿಯ ನಾಲ್ಕು ಫೋಟೋಗಳು ಲಭ್ಯವಾಗಿವೆ. ಸಾಯುವುದಕ್ಕೂ ಮುನ್ನ ರಕ್ತಸಿಕ್ತವಾಗಿದ್ದ ಆತ ಕೈ ಮುಗಿದು ಬೇಡಿಕೊಳ್ಳುತ್ತಿರುವ ಫೋಟೋ ಕೂಡ ಪೊಲೀಸರಿಗೆ ಸಿಕ್ಕಿದೆ. ಆರೋಪಿಗಳಾದ ಪ್ರದೋಶ್ ಮತ್ತು ಇನ್ನೊಬ್ಬನ ಮೊಬೈಲ್ನಿಂದ ಈ ಫೋಟೋ ರಿಟ್ರೀವ್ ಆಗಿದೆ. ಇದು ಪ್ರಮುಖ ಸಾಕ್ಷಿ ಆಗಲಿದೆ. ಒಟ್ನಲ್ಲಿ ಜೈಲಿನಿಂದ ಹೊರಬರಬೇಕೆಂದು ದರ್ಶನ್ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ರೆ ಅತ್ತ ಪೊಲೀಸರು ಮಾತ್ರ ಪ್ರಕರಣವನ್ನು ಸಾಕಷ್ಟು ಗಂಭೀರವಾಗಿ ತೆಗೆದುಕೊಂಡು ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.